ಕಾಮನಬಿಲ್ಲಿನ ಬಣ್ಣ ಇರುವ ವಸ್ತುಗಳನ್ನು ವಶಕ್ಕೆ ಪಡೆದ ಸೌದಿ ಪೊಲೀಸರು! ಯಾಕೆ ಗೊತ್ತಾ?

ಕಾಮನಬಿಲ್ಲಿನ(Rainbow) ಬಣ್ಣ(Colours) ಇರುವಂತ ಯಾವುದೇ ವಸ್ತುಗಳನ್ನು ಸೌದಿ ಅರೇಬಿಯಾದಲ್ಲಿ(Saudi Arabia) ಬಳಕೆ ಮಾಡುವಂತಿಲ್ಲ. ಅಂತಹ ವಸ್ತುಗಳನ್ನು ಮಾರಾಟ ಮಾಡಲು ಕೂಡಾ ಅನುಮತಿ ಇಲ್ಲ. ಇತ್ತೀಚೆಗೆ ಸೌದಿ ಅರೇಬಿಯಾ ರಿಯಾದ್ ನಗರದ ಸ್ಥಳೀಯ ಪೊಲೀಸರು ಅನೇಕ ಕಡೆ ದಾಳಿ ನಡೆಸಿ ಕಾಮನಬಿಲ್ಲಿನ ಬಣ್ಣಗಳಿರುವ ಎಲ್ಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ಇದಕ್ಕೆ ಸೌದಿ ಸರ್ಕಾರ ಕೊಡುವ ಕಾರಣವೆಂದರೆ, ಕಾಮನಬಿಲ್ಲಿನ ಬಣ್ಣವಿರುವ ಧ್ವಜವನ್ನು ಸಲಿಂಗಕಾಮಿಗಳು ತಮ್ಮ ಘನತೆ ಮತ್ತು ಆತ್ಮವಿಶ್ವಾಸದ ಪ್ರತೀಕವಾಗಿ ಬಳಸುತ್ತಾರೆ. ಹೀಗಾಗಿ ಈ ರೀತಿಯ ಬಣ್ಣಗಳಿರುವ ವಸ್ತುಗಳು ಮಕ್ಕಳು ಮತ್ತು ಯುವಕರ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಹೀಗಾಗಿ ಮುಂಜಾಗ್ರತೆ ದೃಷ್ಟಿಯಿಂದ ಕಾಮನಬಿಲ್ಲಿನ ಬಣ್ಣವಿರುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೌದಿ ಸರ್ಕಾರ ಹೇಳಿದೆ. ಇನ್ನು ರಿಯಾದ್ ನಗರದಲ್ಲಿರುವ ಅನೇಕ ಅಂಗಡಿಗಳ ಮೇಲೆ ದಾಳಿ ಮಾಡಿ,

ಕಾಮನಬಿಲ್ಲಿನ ಬಣ್ಣದ ಅಲಂಕಾರಿಕ ವಸ್ತುಗಳು, ಕ್ರೀಡಾ ವಸ್ತುಗಳು, ಟೋಪಿ, ಬಟ್ಟೆ, ಬೂಟು, ವಿದ್ಯಾರ್ಥಿಗಳ ಸಾಮಗ್ರಿ, ಪುಸ್ತಕ, ಬ್ಯಾಗು ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು 1969 ಜೂನ್ 28ರಂದು ಅಮೇರಿಕಾದ ಸ್ಟೋನ್‍ವಾಲ್ ಇನ್ ಎಂಬ ಪ್ರಾಂತ್ಯದಲ್ಲಿ ಪೊಲೀಸರು ಮತ್ತು ಸಲಿಂಗಕಾಮಿಗಳ ನಡುವೆ ಘರ್ಷಣೆ ನಡೆದಿದ್ದವು. ಈ ದಂಗೆಯಲ್ಲಿ ಭಾಗಿಯಾಗಿ ಸಲಿಂಗಿಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿದವರ ಸ್ಮರಣೆಗಾಗಿ 1978ರಲ್ಲಿ ಗಿಲ್ಬರ್ಟ್ ಬ್ಲಾಕ್ ಎಂಬ ಸಲಿಂಗಿ ಕಲಾವಿದ ಕಾಮನಬಿಲ್ಲಿನ ಎಲ್ಲ ಬಣ್ಣಗಳಿರುವ ಧ್ವಜವನ್ನು ವಿನ್ಯಾಸಗೊಳಿಸಿ, ದೊಡ್ಡ ಅಭಿಯಾನ ನಡೆಸಿದ್ದನು.

ನಂತರದ ದಿನಗಳಲ್ಲಿ ಜಗತ್ತಿನ ಎಲ್ಲ ಸಲಿಂಗಿಗಳು ಕಾಮನಬಿಲ್ಲಿನ ಬಣ್ಣಗಳ ಧ್ವಜವನ್ನು ತಮ್ಮ ಘನತೆಯ ಪ್ರತೀಕವೆಂದು ಬಳಸುತ್ತಾರೆ. ಹೀಗಾಗಿ ಸೌದಿ ಅರೇಬಿಯಾ ಸೇರಿದಂತೆ ಕೆಲ ಇಸ್ಲಾಮಿಕ್ ದೇಶಗಳು ಕಾಮನಬಿಲ್ಲಿನ ಬಣ್ಣಕ್ಕೆ ನಿಷೇಧ ಹೇರಿವೆ.

Exit mobile version