ಟಿ20 ವಿಶ್ವಕಪ್: ಭಾರತದಲ್ಲಿ ಪಂದ್ಯಾವಳಿ ಆಯೋಜಿಸಲು ಬಿಸಿಸಿಐಗೆ ಜೂ.28ರವರೆಗೆ ಡೆಡ್ ಲೈನ್ ನೀಡಿರುವ ಐಸಿಸಿ

ಹೊಸದಿಲ್ಲಿ, ಜೂ. 02: ಭಾರತದಲ್ಲಿ ಟಿ20 ವಿಶ್ವಕಪ್ ಆತಿಥ್ಯವಹಿಸುವ ಬಗ್ಗೆ ಜೂನ್ 28ರೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಗೆ ತಿಳಿಸಿದೆ.

ಮುಂಬರುವ ಟಿ20 ವಿಶ್ವಕಪ್‌ ಟೂರ್ನಿ ಆಯೋಜಿಸುವ ಬಗ್ಗೆ ಮಂಗಳವಾರ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಕೋವಿಡ್-19 ಹಿನ್ನೆಲೆಯಲ್ಲಿ ಟಿ20 ವಿಶ್ವಕಪ್ ನಡೆಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಸಮಯಾವಕಾಶ ನೀಡಲಾಗಿದೆ ಎಂದು ಬಿಸಿಸಿಐ ಮೇ 29ರಂದು ತಿಳಿಸಿತ್ತು. ಹೀಗಾಗಿ ಅಕ್ಟೋಬರ್ ಅಥವಾ ನವೆಂಬರ್‌ ವೇಳೆಯಲ್ಲಿ ನಡೆಯಲಿರುವ ಈ ವರ್ಷದ ಟಿ20 ಆವೃತ್ತಿ ಆಯೋಜಿಸುವ ಹಕ್ಕನ್ನು ಬಿಸಿಸಿಐ ಹೊಂದಿದೆ. ವಿಶೇಷವೆಂದರೆ, ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ನಡೆಯಬೇಕಿದ್ದ ಟಿ20 ವಿಶ್ವಕಪ್ ಸಹ ಮುಂದೂಡಲಾಗಿತ್ತು.

ಈ ನಡುವೆ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇ ಅಲ್ಲಿ ನಡೆಸುವ ಬಗ್ಗೆ ಐಸಿಸಿ ಚಿಂತನೆ ನಡೆಸಿದೆ ಎನ್ನಲಾಗಿದ್ದರು, ಟಿ20 ವಿಶ್ವಕಪ್ ಪಂದ್ಯಾವಳಿ ನಡೆಸುವ ಹಕ್ಕನ್ನು ಉಳಿಸಿಕೊಳ್ಳಲು ಬಿಸಿಸಿಐ ಸಹ ತನ್ನ ಪ್ರಯತ್ನ ನಡೆಸಿದೆ.

ಅಲ್ಲದೇ, 2021ರ ಟಿ೨೦ ವಿಶ್ವಕಪ್ ಪಂದ್ಯಾವಳಿಯನ್ನು ಯುಎಇ ನಲ್ಲಿ ನಡೆಸುವ ಕುರಿತು ತಿಳಿಸಿದ್ದು, ಈ ಸಂಬಂಧ ಜೂನ್ ಅಂತ್ಯಕ್ಕೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಐಸಿಸಿ ತಿಳಿಸಿತ್ತು. ಹೀಗಾಗಿ ಈ ಹಿಂದೆ ನಿರ್ಧಾರವಾದಂತೆ ಬಿಸಿಸಿಐ ಭಾರತದಲ್ಲಿ ಟಿ೨೦ ವಿಶ್ವಕಪ್‌ ನಡೆಸಲು ಸಾಧ್ಯವಾಗದಿದ್ದಲ್ಲಿ, ಇಡೀ ಪಂದ್ಯಾವಳಿ ಯುಎಇಗೆ ಸ್ಥಳಾಂತರಗೊಳ್ಳಲಿದೆ. ಈ ನಡುವೆ ಬಿಸಿಸಿಐ ಭಾರತದ 9 ನಗರಗಳಲ್ಲಿ ವಿಶ್ವಕಪ್ ಟಿ೨೦ ಟೂರ್ನಿಯ ಪಂದ್ಯಗಳನ್ನು ನಡೆಸಲು ತೀರ್ಮಾನಿಸಿತ್ತು ಎನ್ನಲಾಗಿದೆ.

ಹೀಗಾಗಿ, 16 ತಂಡಗಳ‌ ಮುಖಾಮುಖಿಯಾಗುವ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ದೆಹಲಿ, ಮುಂಬೈ, ಚೆನ್ನೈ, ಕೋಲ್ಕತಾ, ಅಹಮದಾಬಾದ್, ಬೆಂಗಳೂರು, ಧರ್ಮಶಾಲಾ, ಹೈದರಾಬಾದ್ ಮತ್ತು ಲಕ್ನೋದಲ್ಲಿ ನಡೆಸಲು ಬಿಸಿಸಿಐ ಚಿಂತನೆ ನಡೆಸಿದೆ.

Exit mobile version