ವೈದ್ಯರಿಗೆ 30, ದಾದಿಯರಿಗೆ 20 ಸಾವಿರ ಪ್ರೋತ್ಸಾಹ ಧನ ಘೋಷಿಸಿದ ತಮಿಳುನಾಡು ಸರ್ಕಾರ

mk

ಚೆನ್ನೈ, ಮೇ. 13: ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್​ ಆರೋಗ್ಯ ಕ್ಷೇತ್ರದ ಕಾರ್ಯಕರ್ತರಿಗೆ ಭರ್ಜರಿ ಕೊಡಗೆ ನೀಡಿ ಘೋಷಿಸಿದ್ದಾರೆ. ಕೋವಿಡ್​ ಎರಡನೇ ಅಲೆ ವಿರುದ್ಧ ಸೋಂಕಿತರ ರಕ್ಷಣೆಗೆ ಹಗಲಿರುಳು ದುಡಿಯುತ್ತಿರುವ ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಗೆ ಅವರು ಪ್ರೋತ್ಸಾಹ ಧನ ಘೋಷಿಸಿದ್ದಾರೆ. ಸರ್ಕಾರದ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು, ಇತರೆ ವೈದ್ಯಕೀಯ ಸಿಬ್ಬಂದಿಗಳಿಗೆ ಅವರು ಮೂರು ತಿಂಗಳ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದಾರೆ. ಈ ಮೂಲಕ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಏಪ್ರಿಲ್​ ನಿಂದ ಜೂನ್​ವರೆಗಿನ ಮೂರು ತಿಂಗಳ ಅವಧಿಗೆ ಅವರು ಪ್ರೋತ್ಸಾಹ ಧನವನ್ನು ನೀಡಿದ್ದಾರೆ.

ಕೋವಿಡ್​ ಸೋಂಕಿತರ ಆರೈಕೆಯಲ್ಲಿ ತೊಡಗಿರುವ ಸರ್ಕಾರಿ ವೈದ್ಯರಿಗೆ ತಿಂಗಳಿಗೆ 10 ಸಾವಿರದಂತೆ 30 ಸಾವಿರ ಹಣವನ್ನು ಪ್ರೋತ್ಸಾಹ ಧನವಾಗಿ ನೀಡುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ನರ್ಸ್​ಗಳಿಗೆ ಮೂರು ತಿಂಗಳಿಗೆ 20 ಸಾವಿರ, ಕೋವಿಡ್​ ವಾರ್ಡ್​ನಲ್ಲಿ ಕರ್ತವ್ಯ ನಿರ್ವಹಿಸುವ ಇತರೆ ಸಿಬ್ಬಂದಿಗಳಿಗೆ ತಲಾ 15 ಸಾವಿರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದೇ ವೇಳೆ ಟ್ರೈನಿ ವೈದ್ಯರು ಮತ್ತು ಪಿ ಜಿ ವಿದ್ಯಾರ್ಥಿಗಳಿಗೂ ಅವರನ್ನು ಪ್ರೋತ್ಸಾಹಿಸಲು 20 ಸಾವಿರ ಹಣವನ್ನು ಘೋಷಣೆ ಮಾಡಿದ್ದಾರೆ. ಅವರ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿ ಮತ್ತಷ್ಟು ಉತ್ತೇಜನ ಗೊಳಿಸಲು ಈ ಕಾರ್ಯಕ್ಕೆ ಮುಂದಾಗಿರುವುದಾಗಿ ಡಿಎಂಕೆ ಸರ್ಕಾರ ತಿಳಿಸಿದೆ.

Exit mobile version