ಟೀಂ ಇಂಡಿಯಾ ಸೇರಿದ ರೋಹಿತ್ ಶರ್ಮಾ; ತಂಡದ ಬಲ‌ ಹೆಚ್ಚಿಸಲಿದೆ ಹಿಟ್ ಮ್ಯಾನ್ ಆಗಮನ

ಮೆಲ್ಬೋರ್ನ್, ಡಿ. 30: ಟೆಸ್ಟ್ ಸರಣಿ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ತಂಡವನ್ನು ಕೂಡಿಕೊಂಡಿದ್ದಾರೆ.

ಈಗಾಗಲೇ ಕಾಂಗರೂ ನಾಡಿಗೆ ತೆರಳಿದ್ದ ರೋಹಿತ್ ಶರ್ಮಾ, ನಿಯಮದಂತೆ ಕ್ವಾರಂಟೈನ್ ಆಗಿದ್ದರು. ಇದೀಗ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ, ಮೆಲ್ಬೋರ್ನ್ ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ತಂಡದ ಇತರೆ ಆಟಗಾರರನ್ನು ಕೂಡಿಕೊಂಡರು. ರೋಹಿತ್ ಶರ್ಮಾ ಆಗಮಿಸುತ್ತಿದ್ದಂತೆ ತಂಡದ ಸಹ ಆಟಗಾರರು ಹಾಗೂ ಇತರೆ ಸಿಬ್ಬಂದಿ ಸಂಭ್ರಮದಿಂದ ಬರಮಾಡಿಕೊಂಡರು.

ರೋಹಿತ್ ಆಗಮಿಸುತ್ತಿದ್ದಂತೆ ಸಂತಸಗೊಂಡ ರವೀಂದ್ರ ಜಡೇಜಾ, ವೃದ್ಧಿಮಾನ್ ಸಾಹ ಹಾಗೂ ಇತರೆ ಆಟಗಾರರು ಪ್ರೀತಿಯಿಂದ ಸ್ವಾಗತಿಸಿದರೆ.‌ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಕೆಲಕಾಲ ಮಾತುಕತೆ ನಡೆಸಿದರು. ಈ ನಡುವೆ ರೋಹಿತ್ ಶರ್ಮಾರನ್ನು ಮಾತನಾಡಿಸಿದ ಕೋಚ್ ರವಿಶಾಸ್ತ್ರಿ, ‘ಕ್ವಾರಂಟೈನ್ ಹೇಗಿತ್ತು ಮೈ ಫ್ರೆಂಡ್, ಯು ಆರ್ ಲುಕಿಂಗ್ ಯಂಗ್’ ಎಂದರು.

ರೋಹಿತ್ ಶರ್ಮಾ ಅವರು ಟೀಂ ‌ಇಂಡಿಯಾ ಆಟಗಾರರನ್ನು ಕೂಡಿಕೊಂಡ ಬಗ್ಗೆ ಬಿಸಿಸಿಐ, ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಬಿಡುಗಡೆ ಮಾಡಿದೆ.

Exit mobile version