ಪೋಷಕರಿಲ್ಲದ ವಿದ್ಯಾರ್ಥಿನಿ 9 ಚಿನ್ನದ ಪದಕ ಪಡೆದು ಸಾಧನೆ ; ಪ್ರತಿಯೊಬ್ಬರಿಗೂ ಮಾದರಿಯಾದ ಗ್ರಾಮಪ್ರತಿಭೆ!

tejaswini

ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿನಿ(Student) ಹಾಸ್ಟಲ್ ನಲ್ಲೇ ವಿದ್ಯಾಭ್ಯಾಸ(Education) ಮುಗಿಸಿಕೊಂಡು 9 ಚಿನ್ನದ ಪದಕ(Gold Medal) ಗೆದ್ದು ಎಲ್ಲರಿಗೂ ಮಾದರಿಯಾಗಿದ್ದಾರೆ. ಹೌದು, ವಿ. ತೇಜಸ್ವಿನಿ(V Tejaswini) ಎಂಬ ವಿದ್ಯಾರ್ಥಿನಿ ತಂದೆ, ತಾಯಿ ಇಬರನ್ನು ಕಳೆದುಕೊಂಡ ಬಳಿಕ ಹಾಸ್ಟೆಲ್‌ನಲ್ಲೇ ಉಳಿದು ವಿದ್ಯಾಭ್ಯಾಸ ಮುಗಿಸಿ 9 ಚಿನ್ನದ ಪದಕ ಜೊತೆಗೆ 10 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಕಳೆದ ವಾರ ಮೈಸೂರು ವಿವಿ 102ನೇ ಘಟಿಕೋತ್ಸವದಲ್ಲಿ(Mysuru Convocation Day) ಪ್ರಶಸ್ತಿ ಪಡೆದು ಗಮನ ಸೆಳೆದಿದ್ದಾರೆ.

ಚಾಮರಾಜನಗರ(Chamrajnagar) ಜಿಲ್ಲೆಯ ಕೊಳ್ಳೇಗಾಲ(Kollegal) ತಾಲೂಕಿನ, ಕೊತ್ತೇಗಾಲ ಗ್ರಾಮದ ವಿದ್ಯಾರ್ಥಿನಿಯಾದ ವಿ.ತೇಜಸ್ವಿನಿ ಅವರು ಪದವಿಯಲ್ಲಿ 9 ಚಿನ್ನದ ಪದಕ ಪಡೆದು ಇಂದು ಅನೇಕರಿಗೆ ಮಾರ್ಗದರ್ಶನವಾಗಿದ್ದಾರೆ. ನಾಲ್ಕನೇ ತರಗತಿ ವ್ಯಾಸಂಗ ಮಾಡುವಾಗ ತಮ್ಮ ತಾಯಿಯನ್ನು ಕಳೆದುಕೊಂಡರು, ಪಿಯುಸಿ ವ್ಯಾಸಂಗ ಮಾಡುವ ಸಮಯದಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ಬಾಲ್ಯದಿಂದಲೇ ಪ್ರತಿಭಾವಂತೆ ಆಗಿದ್ದ ತೇಜಸ್ವಿನಿ ಅವರಿಗೆ ಪ್ರೋತ್ಸಾಹ ನೀಡಲು ಯಾರು ಇಲ್ಲ ಎಂಬ ಪ್ರಶ್ನೆ ಕಾಡಿದ್ದಂತೂ ನಿಜ!

ಆದ್ರೆ, ಯಾರು ಇಲ್ಲ ಎಂಬ ಕೂಗನ್ನು ಅಳಿಸಿದ್ದು ಅವರ ಬೆಂಬಲಕ್ಕೆ ನಿಂತದ್ದು, ಆಕೆಯ ಕಾಲೇಜಿನ ಬೋಧಕ ಸಿಬ್ಬಂದಿಯವರು. ತೇಜಸ್ವಿನಿ ಅವರ ಉನ್ನತ ಶಿಕ್ಷಣಕ್ಕಾಗಿ ಮೈಸೂರು ಮಹಾರಾಣಿ ಕಲಾ ಕಾಲೇಜಿಗೆ ನೊಂದಣಿ ಮಾಡಿಸಿ ಸೇರಿಸುತ್ತಾರೆ. ನಂತರ ಆ ಕಾಲೇಜಿನಲ್ಲೂ ಉಪನ್ಯಾಸಕರ ಮೆಚ್ಚುಗೆ ಪಡೆದ ತೇಜಸ್ವಿನಿ ಅವರು, ಪದವಿ ಶಿಕ್ಷಣದಲ್ಲೂ ಅತ್ಯುತ್ತಮ ಅಂಕ ಪಡೆದು 9 ಚಿನ್ನದ ಪದಕ ಪಡೆದಿರುವುದು ಇಲ್ಲಿ ಮೆಚ್ಚಿ, ಶ್ಲಾಘಿಸುವಂತ ಅಂಶ.

ಈ ಕುರಿತು ತೇಜಸ್ವಿನಿ ಅವರೇ ಮಾತನಾಡಿದ್ದು, ಕಳೆದ ನಾಲ್ಕು ವರ್ಷಗಳಿಂದ ನಾನು ಹಾಸ್ಟೆಲ್‌ನಲ್ಲೇ ಉಳಿದು ವ್ಯಾಸಂಗ ಮಾಡುತ್ತಿದ್ದೀನಿ, ಕಾಲೇಜಿನ ಉಪನ್ಯಾಸಕರು, ಸ್ನೇಹಿತರು, ಹಾಸ್ಟೆಲ್‌ನ ವಾರ್ಡನ್ ಇವರೇ ನನಗೆ ಪೋಷಕರಾಗಿದ್ದು, ಇವರ ನೆರವಿನಿಂದಲೇ ಮಾನಸಗಂಗೋತ್ರಿಯಲ್ಲಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಥಮ ವರ್ಷದ ಎಂ.ಎ(MA) ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಒಂದು ಪುಟ್ಟ ಕುಗ್ರಾಮದಿಂದ ಬಂದು ಪದಕ ಪಡೆಯುವ ಮೂಲಕ ಸಾಧಿಸಿರುವ ಗುರಿ ನಿಜಕ್ಕೂ ಗೌರವಿಸುವಂತದ್ದು.

ಈ ವಿಷಯ ಅವರಿಗೆ ಎಲ್ಲಿಲ್ಲದ ಸಂಭ್ರಮ ಮತ್ತು ಗೌರವ ತಂದಿದೆ. ಆದರೆ, ಈ ಒಳ್ಳೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ನಮ್ಮ ಅಪ್ಪ-ಅಮ್ಮ ಇಲ್ಲ ಎನ್ನುವುದೇ ಮನಸ್ಸಿಗೆ ತುಂಬ ಕಷ್ಟಕರವಾದ ಸಂಗತಿ ಎಂದು ತೇಜಸ್ವಿನಿ ಹೇಳಿದ್ದಾರೆ. ನಮ್ಮಪ್ಪನಿಗೆ ನಾನು ಉನ್ನತ ಮಟ್ಟದ ಅಧಿಕಾರಿಯಾಗಬೇಕು ಎಂಬ ಕನಸಿತ್ತು. ಅದನ್ನು ಸಾಕಾರಗೊಳಿಸುತ್ತೇನೆ. ನಾನು ಐಎಎಸ್‌(IAS) ಪರೀಕ್ಷೆ ಬರೆದು ಅಧಿಕಾರಿಯಾಗುತ್ತೇನೆ ಎಂದು ತನ್ನ ಕನಸನ್ನು ತೇಜಸ್ವಿನಿ ಅವರು ಬಹಿರಂಪಡಿಸಿದರು. ತಂದೆ ವೆಂಕಟೇಶ ಹಾಗೂ ತಾಯಿ ನಾಗಮ್ಮ ಪುತ್ರಿಯಾದ ತೇಜಸ್ವಿನಿಗೆ ಸಹೋದರಿ ಮತ್ತು ಸಹೋದರ ಇಬ್ಬರಿದ್ದು, ಇವರಿಬ್ಬರು ಊರಿನಲ್ಲೇ ಇದ್ದು ವ್ಯಾಸಂಗ ಮಾಡುತ್ತಿದ್ದಾರೆ ಎಂಬುದು ತೇಜಸ್ವಿನಿ ಅವರಿಂದ ತಿಳಿದುಬಂದಿದೆ.

ಒಟ್ಟಾರೆ ಈ ಗ್ರಾಮ ಪ್ರತಿಭೆಯ ಸಾಧನೆಗೆ ನಿಮ್ಮದೊಂದು ಮೆಚ್ಚುಗೆ, ಶ್ಲಾಘನೆ ದೊರೆಯಲಿ. ಪ್ರತಿಯೊಂದು ಮನೆಯಲ್ಲೂ ಹೆಣ್ಣುಮಕ್ಕಳ ಸಾಧನೆ ಗರಿಷ್ಠ ಮಟ್ಟವನ್ನು ತಲುಪಲಿ. ಹೆಣ್ಣು ಮಕ್ಕಳ ಸಾಧನೆ ನಾಡಿನ ಜನತೆಗೆ ಸ್ಪೂರ್ತಿಯಾಗಲಿ…ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಈ ಮೂಲಕ ಮತ್ತಷ್ಟು ಹೆಚ್ಚಲಿ ಎಂದು ಆಶಿಸೋಣ.

Exit mobile version