ಮೋದಿ ಟೆಲಿಪ್ರಾಂಪ್ಟರ್

modi teleprompter

ಮೋದಿಗೆ ಕೈಕೊಡ್ತಾ ಟೆಲಿಪ್ರಾಂಪ್ಟರ್! ಮೋದಿ ಭಾಷಣಕ್ಕೆ ಬ್ರೇಕ್‌ ಬೀಳಲು ಕಾರಣ ಏನು?  ಹಾಗಾದ್ರೆ ಮೋದಿಗೆ ಭಾಷಣ ಮಾಡೋಕೇ ಬರಲ್ವಾ?

ಸೋಮವಾರ ದಾವೋಸ್‌ ವರ್ಲ್ಡ್ ಎಕಾನಾಮಿಕ್ ಫೋರಂನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಸಡನ್ ಆಗಿ ಮೋದಿಯವರು ಭಾಷಣ ನಿಲ್ಲಿಸಿದ್ರು. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಒಳಗಾಯಿತು. ಅಲ್ಲದೆ ಪ್ರತಿಪಕ್ಷಗಳಂತು ಈಗ ಹೇಳಿ ಪಪ್ಪು ಯಾರು ಅಂತ ಪ್ರಶ್ನೆ ಮಾಡಿದ್ವು.

ಯಾವಾಗ್ಲೂ ಭಾಷಣದಲ್ಲಿ ಚತುರತೆ ಮೆರೆಯುವ ಮೋದಿಯವರಿಗೆ ಈ ಬಾರಿ ಕೈಕೊಟ್ಟಿದ್ದು ಏನು ಗೊತ್ತಾ ಟೆಲಿಪ್ರಾಂಪ್ಟರ್‌. ಟೆಲಿಪ್ರಾಂಪ್ಟರ್‌ ಅಂದ್ರೆ ಆಧುನಿಕ ರೀತಿಯ ಚೀಟಿ. ಈ ಟೆಲಿಪ್ರಾಂಪ್ಟರ್‌ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದೇ ಆಭಾಸಕ್ಕೆ ಕಾರಣ. ಹಾಗಾದ್ರೆ

ಟೆಲಿಪ್ರಾಮ್ಟರ್ ಅಂದ್ರೆ ಏನು?

ಟೆಲಿಪ್ರಾಮ್ಟರ್ ಅಂದ್ರೆ  ಟಿ.ವಿ ಅಥವಾ ಸಮಾರಂಭಗಳಲ್ಲಿ ಮಾತನಾಡುವ ವ್ಯಕ್ತಿಯ ಕಣ್ಣಿಗೆ ಕಾಣುವಂತೆ ಭಾಷಣದ ಸ್ಕ್ರಿಪ್ಟ್ ಅನ್ನು ಪ್ರದರ್ಶಿಸುವ ಸಾಧನ. ಟೆಲಿಪ್ರಾಮ್ಟರ್ ಬಳಕೆ ಇಂದಿನದಲ್ಲ. ಸುಮಾರು 1948ರಿಂದಲೂ ಇದನ್ನು ಬಳಸಲಾಗುತ್ತಿದೆ. ಈ ಹಿಂದೆ ಟಿ.ವಿಗಳಲ್ಲಿ ಸುದ್ದಿ ಮುಖ್ಯಾಂಶಗಳನ್ನು ಹಾಳೆಗಳಲ್ಲಿ ಬರೆದುಕೊಡಲಾಗುತ್ತಿತ್ತು. ಸುದ್ದಿ ವಾಚನ ಮಾಡುವವರು ಪದೇ ಪದೇ ತಲೆ ಬಗ್ಗಿಸಿ ಹಾಳೆ ನೋಡಿ ಸುದ್ದಿ ಓದುತ್ತಿದ್ದರು. ಇದು ನೋಡುಗರಿಗೆ ಆಭಾಸವನ್ನುಂಟು ಮಾಡುತ್ತಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಮೊದಮೊದಲು ಅರ್ಧ ರೋಲ್ ಕಾಗದದಲ್ಲಿ ಸುದ್ದಿ ಮುಖ್ಯಾಂಶಗಳನ್ನು ವಾಚನ ಮಾಡುವವರ ಎದುರಿಗೆ ರೋಲ್ ಮಾಡಲಾಗುತ್ತಿತ್ತು. ನಂತರದಲ್ಲಿ ಇದು ಸುಧಾರಣೆಗಳನ್ನು ಪ್ರಸ್ತುತ ಇದೊಂದು ಚಿಕ್ಕ ಡಿಜಿಟಲ್ ಸಾಧನವಾಗಿ ಬಳಕೆಯಲ್ಲಿದೆ.

ಟೆಲಿಪ್ರಾಮ್ಟರನ್ನು ಬರೀ ಟಿ.ವಿ. ಮಾಧ್ಯಮದವರು ಮಾತ್ರ ಬಳಸುತ್ತಿಲ್ಲ. ಬದಲಾಗಿ ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳೂ ಕೂಡ ಇದನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ. ಆದರೆ ಕೆಲವೊಮ್ಮೆ ಇಂತಹ ಚಿಕ್ಕ ಯಂತ್ರಗಳು ಕೂಡ ಕೈಕೊಡುತ್ತವೆ. ರಾಜಕಾರಣಿಗಳು ಬಳಸುವ ಟೆಲಿಪ್ರಾಮ್ಟರ್ಗಳು ಕೈಕೊಟ್ಟರೆ ಅದೊಂದು ರಾಜಕೀಯ ಚರ್ಚೆಯ ವಿಷಯವಾಗುತ್ತದೆ ಎಂಬುದಕ್ಕೆ ನೆನ್ನೆ ನಡೆದ ಘಟನೆಯೇ ಸಾಕ್ಷಿ.

1953ರಲ್ಲಿ ಅಮೇರಿಕಾದ ಅಧ್ಯಕ್ಷರಾಗಿದ್ದ ಡಿ ವೈಟ್‌ ಡಿ ಇಸೆನ್ಹೋವರ್ ಅವರು ಅಧ್ಯಕ್ಷೀಯ ಚುನಾವಣಾ ಪ್ರಚಾರಕ್ಕೆ ಟೆಲಿಪ್ರಾಮ್ಟರ್ ಬಳಸಿದ್ದರು. ರಾಷ್ಟ್ರವನ್ನು ಉದ್ದೇಶಿಸಿ ತಮ್ಮ ಭಾಷಣದ ಸಮಯದಲ್ಲಿ ಅವರು ತುಂಬಾ ನಿಧಾನವಾಗಿ ಚಲಿಸುತ್ತಿದ್ದ ಈ ಟೆಲಿಪ್ರಾಮ್ಟರ್ ಅನ್ನು ಬೈಯ್ಯುವುದು ಕೇಳಿಸಿದ್ದಾಗಿ ವರದಿಯಾಗಿತ್ತು. ಇವರು ಮಾತ್ರವಲ್ಲ ಅಮೇರಿಕಾದ ಅಧ್ಯಕ್ಷರಾದ ರೊನಾಲ್ಡ್ ರೇಗನ್, ಬಿಲ್ ಕ್ಲಿಂಟನ್, ಜಾರ್ಜ್ ಡಬ್ಯ್ಲೂ ಬುಷ್, ಸಾರಾ ಪಾಲಿನ್, ಡೊನಾಲ್ಡ್ ಟ್ರಂಪ್, ಬರಾಕ್ ಒಬಾಮಾ ಸೇರಿದಂತೆ ಹಲವಾರು ವಿಶ್ವ ನಾಯಕರು ಟೆಲಿಪ್ರಾಮ್ಟರ್ ಬಳಸುತ್ತಿದ್ದರು.

ಇತ್ತೀಚೆಗೆ ಮೋದಿಯವರು ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದಕ್ಕೆ ಟೆಪ್ರಾಂಪ್ಟರ್‌ ಕೈಕೊಟ್ಟಿದ್ದೇ ಕಾರಣ ಅಂತ ಹೇಳಲಾಗಿದೆ. ಹಾಗಾದ್ರೆ ಮೋದಿ ಟೆಲಿಪ್ರಾಂಪ್ಟರ್‌ ಇಲ್ಲದೆ ಭಾಷಣ ಮಾಡಲ್ವಾ? ಅನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ. ಮೋದಿ ಹೆಚ್ಚಿನ ಸಭೆ ಸಮಾರಂಭಗಳಲ್ಲಿ ಟೆಲಿಪ್ರಾಂಪ್ಟರನ್ನೇ  ಅವಲಂಭಿಸಿರುತ್ತಾರೆ. ಆದ್ರೆ ಚುನಾವಣಾ ರಾಲಿ ಇನ್ನಿತರ ಸಾಮಾನ್ಯ ಸಭೆಗಳಲ್ಲಿ ಟೆಲಿಪ್ರಾಂಪ್ಟರ್‌ ಸಹಾಯ ಇಲ್ಲದೆ ಭಾಷಣ ಮಾಡಬಲ್ಲರು.

ಒಟ್ಟಾರೆ ಮೋದಿಭಾಷಣ ಮತ್ತು ಕೈಕೊಟ್ಟ ಟೆಲಿಪ್ರಾಂಪ್ಟರ್‌ ವಿರೋಧ ಪಕ್ಷದವರಿಗೆ ಆಹಾರ ಆಗಿದ್ದು ಸತ್ಯ. ಅದನ್ನು ತಾಂತ್ರಿಕ ದೋಷ ಅಂತ ಹೇಳಿ ತೇಪೆ ಹಾಕಿ ಮೋದಿ ಸಮರ್ಥನೆ ಮಾಡಲು ಆಡಳಿತ ಪಕ್ಷಗಳು ಹರಸಾಹಸ ಪಟ್ಟವು.

Exit mobile version