Karnataka Rain; ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ಭಾರೀ ಮಳೆ ಸಾಧ್ಯತೆ; ಆರೆಂಜ್‌ ಅಲರ್ಟ್‌ ಘೋಷಣೆ

ಬೆಂಗಳೂರು, ಜೂ. 12: ಈಗಾಗಲೇ ರಾಜ್ಯಕ್ಕೆ ನೈರುತ್ಯ ಮಾನ್ಸೂನ್​​ ಕಾಲಿಟ್ಟಿದ್ದು, ವರುಣ ತನ್ನ ಆರ್ಭಟ ತೋರಿಸುತ್ತಿದ್ದಾನೆ. ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಭಾರತದ ಪಶ್ಚಿಮ ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಮಳೆ ತೀವ್ರಗೊಳ್ಳಲಿದೆ.

ಕರ್ನಾಟಕದ ಉಡುಪಿ, ಒಡಿಶಾ, ಕೇರಳದ ಕೊಜಿಕೊಡೆ, ವಯನಾಡಿನಲ್ಲಿ ಇಂದಿನಿಂದ ಅಂದರೆ ಜೂನ್​ 12ರಿಂದ 15ರವರೆಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಪಶ್ಚಿಮ ಕರಾಳಿಯ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದೆ.

ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಇನ್ನೂ ನಾಲ್ಕು ದಿನ ಅಧಿಕ ಮಳೆಯಾಗಲಿದೆ. ಕರಾವಳಿ ಕರ್ನಾಟಕದಲ್ಲಿ ಶನಿವಾರದಿಂದ ಮಂಗಳವಾರದವರೆಗೆ ಮಳೆಯ ಆರ್ಭಟ ಜೋರಾಗಲಿದೆ. ಇದೇ ಸಮಯದಲ್ಲಿ ಕೇರಳದಲ್ಲೂ ಕೂಡ ಭಾರೀ ಮಳೆಯಾಗಲಿದೆ.

ಕೊಂಕಣ ಮತ್ತು ಮಲಬಾರ್ ಕರಾವಳಿಯಲ್ಲಿ 80-100 ಮಿ.ಮೀ.ಗಿಂತ ಹೆಚ್ಚು ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕರ್ನಾಟಕದ ಕರಾವಳಿ ಪ್ರದೇಶ ಹಾಗೂ ದಕ್ಷಿಣ ಒಳನಾಡಿನ್ಲಲಿ ಶನಿವಾರ ಅಧಿಕ ಮಳೆಯಾಗುವ ಹಿನ್ನೆಲೆ, ಇಂದು ಮತ್ತು ನಾಳೆ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಸೋಮವಾರ ಕೇರಳದಲ್ಲಿ ಮಳೆಯ ತೀವ್ರತೆ ಹೆಚ್ಚಾಗಲಿದ್ದು, ಅಲ್ಲಿ ಅಂದು ಆರೆಂಜ್​ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಶನಿವಾರ, ಭಾನುವಾರ ಮತ್ತು ಮಂಗಳವಾರ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜೊತೆಗೆ ಸೋಮವಾರ ರೆಡ್​ ವಾರ್ನಿಂಗ್​ ಕೂಡ ನೀಡಲಾಗಿದೆ.

ಇನ್ನು, ದಕ್ಷಿಣ ಒಳನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾನುವಾರದಿಂದ ಮಂಗಳವಾರದವರೆಗೆ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ.

ಕೇರಳ ರಾಜ್ಯದಲ್ಲೂ ಇಂದಿನಿಂದ ನಾಲ್ಕು ದಿನ ಅಧಿಕ ಮಳೆಯಾಗಲಿದೆ. ಹೀಗಾಗಿ ಕೇರಳದ ಜಿಲ್ಲೆಗಳಾದ ಮಲಪ್ಪುರಂ, ಕೊಜಿಕೊಡೆ, ವಯನಾಡು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ಸೋಮವಾರ ಆರೆಂಜ್​ ಅಲರ್ಟ್​​ ಘೋಷಣೆ ಮಾಡಲಾಗಿದೆ.

ಈ ವರ್ಷ ನೈರುತ್ಯ ಮಾನ್ಸೂನ್​ ಕೇರಳ ರಾಜ್ಯಕ್ಕೆ ಜೂನ್​ 3ರಂದು ಕಾಲಿಟ್ಟಿದೆ. ಬಳಿಕ ಕರ್ನಾಟಕಕ್ಕೆ ಜೂನ್​ 6ರಂದು ಮುಂಗಾರು ಪ್ರವೇಶವಾಗಿದೆ. ಜೂನ್​ 1ರಿಂದ 10ರವರೆಗೆ ಕೇರಳ ರಾಜ್ಯದಲ್ಲಿ 107.6 ಮಿ.ಮೀ ಮಳೆಯಾದರೆ, ಕರ್ನಾಟಕದಲ್ಲಿ ಇದೇ ಅವಧಿಯಲ್ಲಿ 65.4 ಮಿ.ಮೀ ಮಳೆಯಾಗಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಮಳೆಯ ಅಬ್ಬರ ಹೆಚ್ಚಾಗಿದೆ. ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇಂದಿನಿಂದ 1 ವಾರ ಮಳೆಯಾಗಲಿದೆ. ಹೀಗಾಗಿ, ಹಳದಿ ಅಲರ್ಟ್​ ಘೋಷಿಸಲಾಗಿದೆ.

ಕರ್ನಾಟಕದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಈಗಾಗಲೇ ಜಲಾಶಯಗಳಿಗೆ ಭಾರೀ ನೀರು ಹರಿದುಬರುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಆಗಿರುವುದರಿಂದ ಮುಂದಿನ 1 ವಾರಗಳ ಕಾಲ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.

ಒಂದು ಬಾರಿ ಮುಂಗಾರು ಆರಂಭವಾದ ನಂತರ ಅದರ ಪರಿಣಾಮ ಯಾವ ರೀತಿ ಇರಬಹುದು ಎಂದು ನಾವು ಅಂದಾಜಿಸಬಹುದು. ಜೂನ್​ನಿಂದ ಸೆಪ್ಟೆಂಬರ್​ವರೆಗೆ ಮಳೆಯ ಆರ್ಭಟವಿರಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಈ ವರ್ಷ ಸಾಧಾರಣದಿಂದ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

Exit mobile version