ಸರ್ಕಾರಿ ಆಸ್ಪತ್ರೆಗೆ ಹೊದವರು ಶವವಾಗಿ ಬರುತ್ತಿದ್ದಾರೆ; ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ

ಬೆಂಗಳೂರು, ಮೇ. 06: ಖಾಸಗಿ ಆಸ್ಪತ್ರೆಗೆ ಹೋದವರು ಬದುಕಿ ಬರುತ್ತಿದ್ದಾರೆ, ಸರ್ಕಾರಿ ಆಸ್ಪತ್ರೆಗೆ ಹೋದವರು ಶವವಾಗಿ ಬರುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರ ಶ್ರಮದ ಬಗ್ಗೆ ಅನುಮಾನವಿಲ್ಲ. ಆದರೆ ಕೊರೊನಾ ಸೋಂಕು ತಡೆಯಲು ಆಗುತ್ತಿಲ್ಲವಲ್ಲ ಎಂದು ಪ್ರಶ್ನಿಸಿದರು.

ನಿಮಗೆ ಕೈ ಮುಗಿದು ಕೇಳುತ್ತೇನೆ, ಬಡವರ ಜೀವ ಉಳಿಸಿಕೊಡಿ, ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದೆ, ರಾಜ್ಯದಲ್ಲಿ 56 ಮೆಡಿಕಲ್ ಕಾಲೇಜುಗಳಿವೆ, ಕಾಲೇಜು ವೈದ್ಯರನ್ನು ಕರೆದು ಮಾತನಾಡಿ, ಒಬ್ಬೊಬ್ಬರ ಬಳಿ 700 ಬೆಡ್‌ಗಳಿವೆ ಎಂದರು.

ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕರು ಸೇರಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದಿದ್ದರು, ಅಲ್ಲಿ 200 ಮಂದಿ ಕೆಲಸ ಮಾಡುತ್ತಿದ್ದಾರೆ ಆದರೆ 17 ಮಂದಿ ಹೆಸರನ್ನು ಮಾತ್ರ ಹೇಳಿದ್ದಾರೆ.

ಕೇವಲ ಮುಸ್ಲಿಮರ ಹೆಸರನ್ನು ಮಾತ್ರ ಹೇಳುತ್ತಾರೆ, ಮುಸ್ಲಿಮರು ನಾವು ಸಹೋದರರು, ಒಟ್ಟಿಗೆ ಜೀವಿಸುತ್ತೇವೆ, ಒಟ್ಟಿಗೆ ಸಾಯುತ್ತೇವೆ, ಅವರು ಮಾಂಸ ಕಡಿಯುವುದಿಲ್ಲ ಎಂದರೆ ನಾವು ಮಾಂಸ ತಿನ್ನುವುದಿಲ್ಲ, ಅವರು ಪಂಕ್ಚರ್ ಹಾಕಲ್ಲ ಎಂದರೆ ನಮ್ಮ ಗಾಡಿ ಮುಂದೆಯೇ ಹೋಗಲ್ಲ ಎಂದರು.

ಮೊದಲು ತೇಜಸ್ವಿ ಸೂರ್ಯ ಅವರನ್ನು ಬಂಧಿಸಬೇಕು, ಕೋಮು ದ್ವೇಷ ಭಾವನೆಯನ್ನು ಜನರಲ್ಲಿ ಹುಟ್ಟಿಸುತ್ತಿದ್ದಾರೆ. ಚಾಮರಾಜನಗರ ಘಟನೆಯನ್ನು ಬೇರೆಡೆಗೆ ಸೆಳೆಯಲು ಈ ಬೆಡ್ ಬ್ಲಾಕಿಂಗ್ ವಿಚಾರ ಮುಂದಕ್ಕೆ ತಂದಿದ್ದಾರೆ. ಅದನ್ನೇ ಕುಮಾರಸ್ವಾಮಿಯವರೂ ಕೂಡ ಹೇಳಿದ್ದಾರೆ ಎಂದರು.

Exit mobile version