ಇಂದು ಪಶ್ಚಿಮ ಬಂಗಾಳ, ಅಸ್ಸಾಂ ಎರಡನೇ ಹಂತದ ವಿಧಾನಸಭಾ ಚುನಾವಣೆ

ನವದೆಹಲಿ, ಎ. 01: ದೇಶಾದ್ಯಂತ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಇಂದು ಎರಡನೇ ಹಂತದ ಮತದಾನ ನಡೆಯಲಿದೆ. ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಪಶ್ಚಿಮ ಬಂಗಾಳದ 30 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಅಸ್ಸಾಂನ 39 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಸದಾ ಚುನಾವಣೆ ವೇಳೆ ಘರ್ಷಣೆ ಆಗುವ ಪಶ್ಚಿಮ ಬಂಗಾಳದಲ್ಲಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಪಶ್ಚಿಮ ಬಂಗಾಳದ ಮತದಾನದ ಪೈಕಿ ಅತಿ ಹೆಚ್ಚು ಕುತೂಹಲ ಮೂಡಿಸಿರುವುದು ನಂದಿಗ್ರಾಮ ವಿಧಾನಸಭಾ ಕ್ಷೇತ್ರ. ಇಲ್ಲಿ ಈ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಣಕ್ಕಿಳಿದಿದ್ದು, ನಂದಿಗ್ರಾಮ ಹೋರಾಟದಲ್ಲಿ ಭಾಗಿಯಾಗಿದ್ದ ಸುವೇಂದು ಅಧಿಕಾರಿ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಮಮತಾ ಬ್ಯಾನರ್ಜಿ ಅವರ ಪಟ್ಟ ಶಿಷ್ಯನಂತೆ ಇದ್ದ ಸುವೇಂದು ಅಧಿಕಾರಿ ಹಿಂದೆ ಇದೇ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆ ಎದುರಿಸಿ‌ ಶಾಸಕರಾಗಿದ್ದರು. ಇತ್ತೀಚೆಗೆ ಅವರು ಮಮತಾ ಬ್ಯಾನರ್ಜಿ ವಿರುದ್ಧ ಬಂಡೆದ್ದು ಬಿಜೆಪಿ ಸೇರಿದ್ದರು.

ಈ ಹಿನ್ನೆಲೆಯಲ್ಲಿ ಈಗ ‘ಬಿಜೆಪಿ ಅಧಿಕಾರ ಹಿಡಿಯಲು ಯಾವುದೇ ಹಂತಕ್ಕೂ ಇಳಿಯಬಹುದು. ಹಾಗಾಗಿ ಬಿಜೆಪಿ ಕಾರ್ಯತಂತ್ರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ’ ಎಂದು ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೇರಿದಂತೆ ಹತ್ತು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದಿದ್ದಾರೆ.

Exit mobile version