ಟೋಕಿಯೋ ಒಲಂಪಿಕ್ಸ್: ಡಿಸ್ಕಸ್ ಥ್ರೋನಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಕಮಲ್ಪ್ರೀತ್ ಕೌರ್

ಟೋಕಿಯೋ, ಜು. 31: ಟೋಕಿಯೋ ಒಲಂಪಿಕ್ಸ್ ನ ಡಿಸ್ಕಸ್ ಥ್ರೋ ಸ್ಪರ್ಧೆಯ ಮಳೆಯರ ವಿಭಾಗದಲ್ಲಿ ಭಾರತದ ಕಮಲ್ಪ್ರೀತ್ ಕೌರ್ ಫೈನಲ್ ಪ್ರವೇಶಿಸಿದ್ದು, ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಲಭಿಸುವ ನಿರೀಕ್ಷೆ ಹೆಚ್ಚಾಗಿದೆ.

ಅಥ್ಲೆಟಿಕ್ಸ್ ವಿಭಾಗದಲ್ಲಿ ಶನಿವಾರ ನಡೆದ ಡಿಸ್ಕಸ್ ಥ್ರೋ ಮಹಿಳೆಯರ ವಿಭಾಗದಲ್ಲಿ ‘ಎ’ ಗುಂಪಿನಿಂದ ಸ್ಪರ್ಧಿಸಿದ್ದ ಕಮಲ್ಪ್ರೀತ್ ಕೌರ್, ಮೂರು ಸುತ್ತಿನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಮೊದಲ ಪ್ರಯತ್ನದಲ್ಲಿ 60.29 ಮೀಟರ್ ದೂರ ಎಸೆದ ಕಮಲ್ಪ್ರೀತ್, ನಂತರದ ಎರಡು ಸುತ್ತಿನಲ್ಲಿ ಬಲಿಷ್ಠ ಪ್ರದರ್ಶನ ನೀಡಿದರು.

ಪರಿಣಾಮ ಎರಡನೇ ಪ್ರಯತ್ನದಲ್ಲಿ 63.97 ಮೀಟರ್ ದೂರಕ್ಕೆ ಡಿಸ್ಕಸ್ ಎಸೆದ ಕಮಲ್ಪ್ರೀತ್, ಕೊನೆಯ ಹಾಗೂ ಮೂರನೇ ಸುತ್ತಿನಲ್ಲಿ 64 ಮೀಟರ್ ದೂರಕ್ಕೆ ಡಿಸ್ಕಸ್ ಎಸೆಯುವ ಮೂಲಕ ಕ್ವಾಲಿಫೈಯಿಂಗ್ ಸುತ್ತಿನಲ್ಲಿ 2ನೇ ಸ್ಥಾನ ಪಡೆದು ಫೈನಲ್ ಸುತ್ತಿಗೆ ಎಂಟ್ರಿ ಪಡೆದಿದ್ದಾರೆ. ಡಿಸ್ಕಸ್ ಥ್ರೋ ಫೈನಲ್ ಹಣಾಹಣಿ ಆ.2ರಂದು ನಡೆಯಲಿದೆ.

ಸೀಮಾ ಪೂನಿಯಾ ಹೊರಕ್ಕೆ ಮತ್ತೊಂದೆಡೆ ಡಿಸ್ಕಸ್ ಥ್ರೋ ಮಹಿಳೆಯರ ವಿಭಾಗದಿಂದ ಸ್ಪರ್ಧಿಸಿದ್ದ ಮತ್ತೊಬ್ಬ ಭಾರತೀಯ ಆಟಗಾರ್ತಿ ಸೀಮಾ ಪೂನಿಯಾ ಟೋಕಿಯೋ ಒಲಂಪಿಕ್ಸ್ ನಿಂದ ಹೊರಬಿದ್ದಿದ್ದಾರೆ. ಶನಿವಾರ ನಡೆದ ಫೈನಲ್ ಸುತ್ತಿನ ಕ್ವಾಲಿಫೈಯಿಂಗ್ ಸ್ಪರ್ಧೆಯಲ್ಲಿ ಕೇವಲ 60.57 ಮೀಟರ್ ದೂರ ಎಸೆಯುವ ಮೂಲಕ 16ನೇ ಸ್ಥಾನದೊಂದಿಗೆ ತಮ್ಮ ಹೋರಾಟ ಅಂತ್ಯಗೊಳಿಸಿ, ಕ್ರೀಡಾಕೂಟದಿಂದ ಹೊರಗುಳಿದರು.

Exit mobile version