13 ತಿಂಗಳ ನಂತರ ಹೊರಬಂದ ಸುರಂಗ ಯಂತ್ರ ‘ಊರ್ಜಾ’

ಮೆಟ್ರೋ ಸುರಂಗ ಕಾಮಗಾರಿಗೆ ಬಳಸುತ್ತಿರುವ ಉರ್ಜಾಯಂತ್ರ

ಬೆಂಗಳೂರು ಸೆ 23 : ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದ್ದು, ಕಾಳೇನ ಅಗ್ರಹಾರ-ನಾಗವಾರ ಮಾರ್ಗದ ಯೋಜನೆಯಲ್ಲಿ, ಕಂಟೋನ್ ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು 13 ತಿಂಗಳ ನಂತರ ಹೊರಬಂದ ಸುರಂಗ ಯಂತ್ರ ‘ಊರ್ಜಾ’ವನ್ನು ಬರಮಾಡಿಕೊಳ್ಳಲಾಯಿತು.

ಶಿವಾಜಿನಗರದಲ್ಲಿ 855 ಮೀ. ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ 2020ರ ಆಗಸ್ಟ್ ತಿಂಗಳಿನಲ್ಲಿ ಈ ಯಂತ್ರ ಸುರಂಗ ಪ್ರವೇಶ ಮಾಡಿತ್ತು. ಇದೀಗ ಸುದೀರ್ಘ 13 ತಿಂಗಳುಗಳ ಬಳಿಕ ಈ ಯಂತ್ರ ಹೊರಬಂದಿದೆ.

ಊರ್ಜಾ ಯಂತ್ರ ಹೊರಬರುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೀಕ್ಷಣೆ ಮಾಡಿದರು. ಕಂಟೋನ್ಮೆಂಟ್‌ನಿಂದ ಶಿವಾಜಿನಗರ ಮಾರ್ಗವಾಗಿ ಈ ಸುರಂಗ ಕೊರೆಯಲಾಗಿದೆ‌. 855 ಮೀ. ಸುರಂಗ ಕೊರೆದು ಈ ಯಂತ್ರ ಹೊರ ಬಂದಿದೆ ಎಂದು ಮೂಲಗಳು ತಿಳಿಸಿವೆ.

ನಮ್ಮ ಮೆಟ್ರೋ ಯೋಜನೆಯ ಎರಡನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ನೀಡಲಾಗಿದ್ದ 2025ರ ಗಡುವನ್ನು 2024 ಕ್ಕೆ ನಿಗದಿ ಪಡಿಸುವಂತೆ ಮತ್ತು ತಕ್ಕ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆಯೇ ಮೂರನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದಾಗಿಯೂ ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಜನಪ್ರತಿನಿಧಿಗಳು, ಸುರಂಗ ಕೊರೆಯುವ ಊರ್ಜ ಯಂತ್ರವು ಬೆಂಗಳೂರಿನ ಕಂಟೋನ್ಮೆಂಟ್ ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗೆ ಸುರಂಗ ಮಾರ್ಗ ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿ ಹೊರಬರುವುದನ್ನು ಇಂದು ವೀಕ್ಷಿಸಿದರು.

Exit mobile version