ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಬೆಂಬಲ ಸೂಚಿಸಿದ ಮಾಜಿ ಸಿಎಂ ಉದ್ಧವ್ ಠಾಕ್ರೆ

Draupadi murmu

ರಾಷ್ಟ್ರಪತಿ ಚುನಾವಣೆಯಲ್ಲಿ(President Election) ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ಚರ್ಚಿಸಲು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ(Uddhav Thackrey) ಅವರು ಎಲ್ಲಾ ಸಂಸದರ ಸಭೆ ಕರೆದಿದ್ದರು. ಬಹುತೇಕ ಸಂಸದರು ಎನ್ಡಿಎ ಅಭ್ಯರ್ಥಿಗೆ(NDA Candidate) ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ(Maharashtra) ಮಾಜಿ ಮುಖ್ಯಮಂತ್ರಿಗಳಾದ ಉದ್ದವ್ ಠಾಕ್ರೆ(Uddhav Thackrey) ಕೈಗೊಳ್ಳುವ ತೀರ್ಮಾನ ಭಾರೀ ಕುತೂಹಲವನ್ನೇ ಕೆರಳಿಸಿತ್ತು.

ಇದೀಗ ಈ ಕುತೂಹಲಕ್ಕೆ ತೆರೆ ಬಿದ್ದಿದ್ದು, ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು(Draupadi Murmu) ಅವರಿಗೆ ಬೆಂಬಲ ನೀಡುವುದಾಗಿ ಶಿವಸೇನ ನಾಯಕ ಉದ್ಧವ್ ಠಾಕ್ರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಉದ್ದವ್ ಠಾಕ್ರೆ, “ರಾಷ್ಟ್ರಪತಿ ಚುನಾವಣೆಯಲ್ಲಿ ಯಾವುದೇ ಒತ್ತಡವಿಲ್ಲದೆ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನಾ ನಿರ್ಧರಿಸಿದೆ. ಶಿವಸೇನಾ ಸಂಸದರ ಸಭೆಯಲ್ಲಿ ಯಾರೂ ಕೂಡಾ ಒತ್ತಡ ಹಾಕಲಿಲ್ಲ” ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.


ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುವ ಅವಕಾಶವಿರುವುದಾಗಿ ಪಕ್ಷದ ಬುಡಕಟ್ಟು ಮುಖಂಡರು ಹೇಳಿರುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಮುರ್ಮು ಅವರನ್ನು ಬೆಂಬಲಿಸಬಾರದು. ಆದ್ರೆ, ನಾವು ಸಣ್ಣ ಮನಸ್ಥಿತಿ ಹೊಂದಿಲ್ಲ. ಹೀಗಾಗಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ತೀರ್ಮಾನ ಮಾಡಿದೆ ಎಂದು ತಿಳಿಸಿದರು. ಇದೇ ತಿಂಗಳ 18 ರಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.


ಆದರೆ ಶಿವಸೇನೆಯ ಈ ನಿರ್ಧಾರಕ್ಕೆ ಕಾಂಗ್ರೆಸ್ ವ್ಯಂಗ್ಯ ಟೀಕೆ ಮಾಡಿದೆ. “ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಶಿವಸೇನೆಯ ಕ್ರಮವು ಪಕ್ಷದಲ್ಲಿ ಪ್ರಜಾಪ್ರಭುತ್ವದ ಅಂತ್ಯ” ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಹೇಳಿದ್ದಾರೆ. ಶಿವಸೇನೆ ದ್ರೌಪದಿ ಮುರ್ಮುಗೆ ಬೆಂಬಲ ನೀಡಿದರೆ ಅದೊಂದು ಐತಿಹಾಸಿಕ ನಿರ್ಧಾರ. ಏಕೆ ಗೊತ್ತಾ? ಈ ಹಿಂದೆ ಬಾಳಾಸಾಹೇಬ್ ಠಾಕ್ರೆ ಅವರು ಆದೇಶ ನೀಡುತ್ತಿದ್ದರು ಮತ್ತು ಸಂಸದರು ಅನುಸರಿಸುತ್ತಿದ್ದರು.

ಈ ಬಾರಿ ಸಂಸದರ ಆದೇಶದಂತೆ ಪಕ್ಷವು ಅನುಸರಿಸುತ್ತದೆ. ಇದು ಶಿವಸೇನೆಯ ಆಂತರಿಕ ಪ್ರಜಾಪ್ರಭುತ್ವದ ಪರೀಕ್ಷೆಯಾಗಿದೆ” ಎಂದು ಸಂಜಯ್ ನಿರುಪಮ್ ಟ್ವೀಟ್ ಮಾಡಿದ್ದಾರೆ.

Exit mobile version