ಉಜಿರೆ ಬಾಲಕನ ಅಪಹರಣ ಸುಖಾಂತ್ಯ; ಆರೋಪಿಗಳ ಬಂಧನ

ಮಂಗಳೂರು, ಡಿ. 19: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಏಳು ವರ್ಷದ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಪ್ರಕರಣ ಸಂಬಂಧ ಕೋಲಾರದಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ.

ಉಜಿರೆಯಲ್ಲಿ ಉದ್ಯಮಿಯಾಗಿರುವ ಎ. ಕೆ. ಶಿವನ್ ಎಂಬುವರ ಏಳು ವರ್ಷದ ಮೊಮ್ಮಗ ಅನುಭವ್‌ನನ್ನು ಮನೆ ಬಳಿ ಆಟವಾಡುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಗುರುವಾರ ಸಂಜೆ ಅಪಹರಣ ಮಾಡಿದ್ದರು. ಬಾಲಕನ ತಂದೆ ಬಿಜೋಯ್, ಹಾರ್ಡ್‌ವೇರ್ ಉದ್ಯಮಿಯಾಗಿದ್ದಾರೆ. ಶುಕ್ರವಾರ ಮನೆಯವರಿಗೆ ಕರೆ ಮಾಡಿದ ಅಪಹರಣಕಾರರು ಬಾಲಕನ ಬಿಡುಗಡೆಗೆ 17 ಕೋಟಿ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಆನಂತರ ಹತ್ತು ಕೋಟಿಗೆ ಬೇಡಿಕೆ ಇಟ್ಟು, ಕೊನೆಗೆ 25 ಲಕ್ಷ ನೀಡುವಂತೆ ಕೇಳಿದ್ದರು.

ಮಂಗಳೂರು ಪೊಲೀಸರು ಬಾಲಕನ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿ ದುಷ್ಕರ್ಮಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂರ್ನಹೊಸಳ್ಳಿ ಗ್ರಾಮದಲ್ಲಿ ಶನಿವಾರ ಆರು ಜನರನ್ನು ಬಂಧಿಸಲಾಗಿದೆ. ಲಾರ ಎಸ್ ಪಿ ಕಾರ್ತಿಕ್ ರೆಡ್ಡಿ ನೆರವಿನಿಂದ ಮಂಗಳೂರು ಪೊಲೀಸರ ವಿಶೇಷ ತಂಡ ಆರೋಪಿಗಳನ್ನು ಬಂಧಿಸಿದೆ.

ಕೂರ್ನಹೊಸಳ್ಳಿ ಗ್ರಾಮದ ಮಂಜುನಾಥ್ ಹಾಗೂ ಮುನೇಶ್ ಎಂಬುವರ ಮನೆಯಲ್ಲಿ ಬಾಲಕ ಅನುಭವ್ ನನ್ನು ಬಂಧನದಲ್ಲಿಟ್ಟಿದ್ದರು. ಮಂಡ್ಯ ಮೂಲದ ಗಂಗಾಧರ್, ಬೆಂಗಳೂರಿನ ಕೋಮಲ್ ಎಂಬುವರನ್ನು ಬಂಧಿಸಲಾಗಿದೆ. ಶನಿವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವುದಾಗಿ ತಿಳಿದುಬಂದಿದೆ.

Exit mobile version