Delhi: ಅಸ್ಸಾಂನ ಪ್ರತ್ಯೇಕತವಾದಿ ಉಗ್ರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (United Liberation Front of Assam) ತನ್ನ ದಶಕಗಳ ಶಸ್ತಾಸ್ತ್ರ ಹೋರಾಟವನ್ನು ತ್ಯಜಿಸಿ, ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ನಿರಂತರ ಮಾತುಕತೆಯ ಫಲವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಸಮ್ಮುಖದಲ್ಲಿ ಕೇಂದ್ರ ಮತ್ತು ಅಸ್ಸಾಂ (Assam) ಸರ್ಕಾರದೊಂದಿಗೆ ತ್ರಿಪಕ್ಷೀಯ ಒಪ್ಪಂದಕ್ಕೆ ಅಸ್ಸಾಂನ ಅತ್ಯಂತ ಹಳೆಯ ದಂಗೆಕೋರ ಗುಂಪು ಉಲ್ಪಾ ಸಹಿ ಹಾಕಿದೆ.
ಈ ಮೂಲಕ ಈಶಾನ್ಯ ರಾಜ್ಯಗಳಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಮಾತನಾಡಿದ ಗೃಹ ಸಚಿವ ಅಮಿತ್ ಶಾ (Amit Shah) ಅವರು, “ಇಂದು ಅಸ್ಸಾಂನ ಭವಿಷ್ಯದ ಉಜ್ವಲ ದಿನವಾಗಿರುವುದು ನನಗೆ ಸಂತೋಷದ ವಿಷಯವಾಗಿದೆ. ದೀರ್ಘಕಾಲದವರೆಗೆ ಅಸ್ಸಾಂ ಮತ್ತು ಈಶಾನ್ಯವು ಹಿಂಸಾಚಾರವನ್ನು ಎದುರಿಸುತ್ತಿತ್ತು.
ಶಾಂತಿ ಒಪ್ಪಂದಕ್ಕೆ ಉಲ್ಫಾ ಸಹಿ ಹಾಕಿರುವುದು ಇಡೀ ಈಶಾನ್ಯಕ್ಕೆ ಮತ್ತು ವಿಶೇಷವಾಗಿ ಅಸ್ಸಾಂಗೆ ಶಾಂತಿಯ ಹೊಸ ಅವಧಿಯ ಆರಂಭವನ್ನು ಸೂಚಿಸುತ್ತದೆ. ಇನ್ನು ಭಾರತ ಸರ್ಕಾರದ ಮೇಲೆ ನೀವು ಇಟ್ಟುಕೊಂಡಿರುವ ನಂಬಿಕೆ, ಗೃಹ ಸಚಿವಾಲಯದ ಕಡೆಯಿಂದ, ನೀವು ಕೇಳದೆಯೇ ಎಲ್ಲವನ್ನೂ ಪೂರೈಸಲು ಸಮಯಕ್ಕೆ ಅನುಗುಣವಾಗಿ ಕಾರ್ಯಕ್ರಮವನ್ನು ಮಾಡಲಾಗುವುದು ಎಂದು ನಾನು ಉಲ್ಫಾ ಪ್ರತಿನಿಧಿಗಳಿಗೆ ಭರವಸೆ ನೀಡಲು ಬಯಸುತ್ತೇನೆ “ ಎಂದು ಹೇಳಿದರು.
ಇನ್ನು ಗೃಹ ಸಚಿವಾಲಯದ ಅಡಿಯಲ್ಲಿ ಸಮಿತಿಯನ್ನು ರಚಿಸಲಾಗುವುದು, ಇದು ಒಪ್ಪಂದ ಪತ್ರದ ಅಡಿಯಲ್ಲಿ ಒಪ್ಪಂದಗಳನ್ನು ಪೂರೈಸಲು ಅಸ್ಸಾಂ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Biswa Sharma) ಅವರು ಇದನ್ನು ಅಸ್ಸಾಂಗೆ “ಐತಿಹಾಸಿಕ ದಿನ” ಎಂದು ಕರೆದಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧಿಕಾರಾವಧಿಯಲ್ಲಿ ಸುಮಾರು 8,756 ಉಗ್ರಗಾಮಿ ಸಂಘಟನೆಗಳ ಸದಸ್ಯರು ಮುಖ್ಯವಾಹಿನಿಗೆ ಸೇರಿದ್ದಾರೆ. ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಗುಂಪನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಲಾಯಿತು. ನಂತರ 1990 ರಿಂದ ಭಾರತದಲ್ಲಿ ನಿಷೇಧಿಸಲಾಯಿತು. 2011 ರಲ್ಲಿ, ಈ ಗುಂಪು ಕೇಂದ್ರ ಸರ್ಕಾರ ಮತ್ತು ಅಸ್ಸಾಂ ಸರ್ಕಾರದೊಂದಿಗೆ ಕಾರ್ಯಾಚರಣೆಗಳ ಅಮಾನತು (SoO) ಗಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲು ಮಾತುಕತೆಗಳನ್ನು ನಡೆಸುತ್ತಿತ್ತು.