ನನ್ನ ರಕ್ತದಲ್ಲಿರುವುದು ಹಿಂದೂ ಡಿಎನ್‍ಎ : ಉಮರ್ ಷರೀಪ್!

umar shareef

ನನ್ನ ರಕ್ತದಲ್ಲಿರುವುದು ಹಿಂದೂ ಡಿಎನ್‍ಎ(DNA). ಅದನ್ನು ಹೇಳಿಕೊಳ್ಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ನೂರಾರೂ ವರ್ಷಗಳ ಹಿಂದೆ ಈ ನೆಲದಲ್ಲಿದ್ದ ನನ್ನ ಪೂರ್ವಜರು ಹಿಂದೂಗಳಾಗಿದ್ದರು. ಹೀಗಾಗಿ ನನ್ನ ಮೈಯಲ್ಲಿ ಹರಿಯುತ್ತಿರುವುದು ಹಿಂದೂ ರಕ್ತ ಎಂದು ಮುಸ್ಲಿಂ ಮುಖಂಡ ಉಮರ್ ಷರೀಪ್(Umar Shareef) ಹೇಳಿದರು.

ಬೆಂಗಳೂರಿನ(Bengaluru) ರಾಜಾಜಿನಗರದ(Rajajinagar) ಖಾಸಗಿ ಹೋಟೆಲ್‍ನಲ್ಲಿ ನಡೆದ ‘ಸ್ನೇಹ ಸಮ್ಮಿಲನ’ ಎಂಬ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದಲ್ಲಿ ನಾವೆಲ್ಲರೂ ಒಂದಾಗಿ ಶಾಂತಿಯಿಂದ ಬಾಳಬೇಕಿದೆ. ನಮ್ಮ ನಡುವೆ ವೈಮನಸ್ಸು ಸೃಷ್ಟಿಯಾದಷ್ಟು ಅಶಾಂತಿ ಸೃಷ್ಟಿಯಾಗುತ್ತದೆ. ಹೀಗಾಗಿ ಹಿಂದೂ-ಮುಸ್ಲಿಮರು ಪರಸ್ಪರ ನಂಬಿಕೆಗಳನ್ನು ಇಟ್ಟುಕೊಂಡು ಬದುಕಬೇಕಿದೆ. ನಾನು ನನ್ನ ಮನಃಸಾಕ್ಷಿಯಾಗಿ ಇಲ್ಲಿಗೆ ಬಂದಿದ್ದೇನೆ. ನನ್ನ ಮನಸ್ಸಿನಲ್ಲಿ ಯಾವುದೇ ಕಪಟವಿಲ್ಲದೇ ಸ್ನೇಹ ಸಾಧಿಸಲು ಇಲ್ಲಿಗೆ ಬಂದಿದ್ದೇನೆ ಎಂದರು.

ಇನ್ನು ‘ವಂದೇ ಮಾತರಂ’ ಮತ್ತು ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆಗಳನ್ನು ಮುಸ್ಲಿಮರು ಕೂಗುವುದರಲ್ಲಿ ಯಾವುದೇ ತಪ್ಪಿಲ್ಲ. ನಾವೆಲ್ಲರೂ ಈ ನೆಲವನ್ನು ತಾಯಿ ಎಂದು ಭಾವಿಸಿದ್ದೇವೆ. ಹೀಗಾಗಿ ತಾಯಿಗೆ ಜೈಕಾರ ಕೂಗುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ. ನಮ್ಮಲ್ಲಿ ಅಜ್ಞಾನ ಹೆಚ್ಚಾಗಿದೆ. ಅದರಲ್ಲೂ ಬಡವರಲ್ಲಿ ಧರ್ಮದ ಬಗ್ಗೆ ಅಜ್ಞಾನ ಹೆಚ್ಚಾಗಿದೆ. ಮೊದಲು ಅದನ್ನು ಸರಿಪಡಿಸಬೇಕಿದೆ ಎಂದರು.

ಇನ್ನು ಈ ಸಭೆಯನ್ನು ಸಂತೋಷ್ ಗುರೂಜೀ ನೇತೃತ್ವದಲ್ಲಿ ನಡೆಸಲಾಗಿದ್ದು, ಜಾಮೀಯಾ ಮಸೀದಿ ಮತ್ತು ಶಿವಾಜಿನಗರದ ಮುಸ್ಲಿಂ ಧರ್ಮ ಗುರುಗಳು ಇದರಲ್ಲಿ ಭಾಗಿಯಾಗಿದ್ದರು. ರಾಜ್ಯದಲ್ಲಿ ನಡೆಯುತ್ತಿರುವ ಧರ್ಮ ದಂಗಲ್‍ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಈ ಸಭೆಯಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಚರ್ಚೆ ನಡೆಸಿದರು. ಸಹಬಾಳ್ವೆಯಿಂದ ಬದುಕೋಣ, ದ್ವೇಷ ಭಾವನೆ ತೊಡೆದು ಹಾಕಿ, ಶಾಂತಿಯಿಂದ ಬದುಕೋಣ ಎಂದು ಕರೆ ನೀಡಿದರು.

Exit mobile version