ಸಂತ್ರಸ್ತ ಯುವತಿ ರಕ್ಷಣೆಗೆ ಮೊರೆಯಿಡುತ್ತಿರುವುದು ಪೊಲೀಸರ ವೈಫಲ್ಯ ಮತ್ತು ಪೂರ್ವಗ್ರಹಕ್ಕೆ ಹಿಡಿದ ಕನ್ನಡಿ: ಸಿದ್ದರಾಮಯ್ಯ

ಬೆಂಗಳೂರು, ಮಾ. 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿ ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆಗಾಗಿ ಮೊರೆಯಿಡುತ್ತಿರುವುದು ರಾಜ್ಯ ಪೊಲೀಸರ ವೈಫಲ್ಯ ಮತ್ತು ಪೂರ್ವಗ್ರಹಕ್ಕೆ ಹಿಡಿದ ಕನ್ನಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. .

ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಬಿಡುಗಡೆ ಮಾಡಿರುವ ಎರಡನೇ ವಿಡಿಯೋದಲ್ಲಿ ತನ್ನ ಪೋಷಕರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಹೀಗಾಗಿ ಸರಣಿ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಹೆಣ್ಣುಮಗಳು ತನಗೆ ಮತ್ತು ತನ್ನ ಕುಟುಂಬಕ್ಕೆ ರಕ್ಷಣೆ ಕೋರಿ ಮೊರೆಯಿಡುತ್ತಿರುವುದು ರಾಜ್ಯ ಪೊಲೀಸರ ವೈಫಲ್ಯ ಮತ್ತು ಪೂರ್ವಗ್ರಹಕ್ಕೆ ಹಿಡಿದ ಕನ್ನಡಿ. ಮುಖ್ಯಮಂತ್ರಿಗಳು ತಕ್ಷಣ ಗಮನಹರಿಸಿ ಆ ಹೆಣ್ಣುಮಗಳಿಗೆ ರಕ್ಷಣೆ ನೀಡಲು ಪೊಲೀಸರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಅಲ್ಲದೇ, ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕಳಿಸಿದ್ದ ಸಿಡಿಯನ್ನು ಮಾಧ್ಯಮಕ್ಕೆ ಸೋರಿಬಿಡಲಾಗಿದೆ ಎಂದು ಸಂತ್ರಸ್ತ ಮಹಿಳೆ ಮಾಡಿರುವ ಆರೋಪ ಗಂಭೀರ‌ ಸ್ವರೂಪದ್ದಾಗಿದೆ. ಇದರಿಂದಾಗಿ ಸರ್ಕಾರ ತನಿಖೆಗಾಗಿ ರಚಿಸಿರುವ ಎಸ್.ಐ.ಟಿ ಯ ಮೇಲಿನ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡುತ್ತಿದೆ.

ಹೀಗಾಗಿ, ಸಿಡಿ ಹಗರಣದ ಪೊಲೀಸ್ ತನಿಖೆ ಪ್ರಾರಂಭದ ದಿನದಿಂದಲೂ ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಮೊದಲ ದೂರು ದಾಖಲಾದ ತಕ್ಷಣ ಪೊಲೀಸರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪ್ರಕರಣ ದಾಖಲಿಸದಿರುವುದು ನಿರ್ಭಯಾ ಪ್ರಕರಣದ ಸುಪ್ರೀಂ ಕೋರ್ಟಿನ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ರೈತ ಮುಖಂಡ ರಾಕೇಶ್ ಟಿಕಾಯತ್ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ರೈತನಾಯಕ ರಾಕೇಶ್ ಟಿಕಾಯತ್ ವಿರುದ್ಧ ಶಿವಮೊಗ್ಗ ಮತ್ತು ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ತಾನೊಬ್ಬ ರೈತನಾಯಕನೆಂದು ಬಿಂಬಿಸುತ್ತಾ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಯಡಿಯೂರಪ್ಪ ಅವರ ಅಸಲಿ ಮುಖ ಮತ್ತೆ ಅನಾವರಣಗೊಂಡಿದೆ. ತಕ್ಷಣ ಈ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇನೆ.

ಜತೆಗೆ, ರೈತವಿರೋಧಿ ಬಿಜೆಪಿ ಸರ್ಕಾರದ ಕರಾಳ ಕೃಷಿಕಾಯ್ದೆ ವಿರೋಧಿಸುವವರನ್ನು ಅಪರಾಧಿಗಳಂತೆ ಕಾಣುವುದು ಸಹಜವೇ ಆಗಿದೆ. ಆದರೆ ದೇಶದ ಜನತೆಗೆ ನಿಜವಾದ ಅಪರಾಧಿಗಳು ಯಾರೆಂದು ಗೊತ್ತಾಗಿದೆ. ಪೊಲೀಸ್ ಬಲಪ್ರಯೋಗದಿಂದ ರೈತಶಕ್ತಿಯನ್ನು ಹಣಿಯಬಹುದೆಂದು ರಾಜ್ಯ ಸರ್ಕಾರ ತಿಳಿದುಕೊಂಡಿದ್ದರೆ ಅದು ಭ್ರಮೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

Exit mobile version