Bengaluru: ಇನ್ನೇನು ಕೆಲವೇ ದಿನಗಳಲ್ಲಿ ಬೇಸಿಗೆ ಆರಂಭವಾಗುತ್ತದೆ ಎನ್ನುವಾಗಲೇ ಬೆಂಗಳೂರಿನಲ್ಲಿ (Bengaluru) ನೀರಿನ ಸಮಸ್ಯೆ ಎದುರಾಗಿದೆ. ಉದ್ಯಾನ ನಗರಿಯ 1.4 ಕೋಟಿ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.ಬೋರ್ ವೆಲ್ಗಳ (Borewell) ಅಂತರ್ಜಲ ಮಟ್ಟ ಕುಸಿದಿದ್ದು, ನೀರು ಸಿಗುತ್ತಿಲ್ಲ. ಸಾರ್ವಜನಿಕರು ಕುಡಿಯುವ ನೀರಿಗೆ ಶುದ್ಧ ನೀರಿನ ಘಟಕಗಳನ್ನು ಅವಲಂಬಿಸಿದ್ದರು. ಇದೀಗ ಒಂದು ತಿಂಗಳಿನಿಂದ ಅವೂ ಬಂದ್ ಆಗಿವೆ. ಹೀಗಾಗಿ ನೀರಿಗೆ ಬರ ಆವರಿಸಿದೆ.
ಆರ್.ಆರ್.ನಗರ, ಕೆಂಗೇರಿ, ಪೀಣ್ಯ, ಥಣಿಸಂದ್ರ (RR Nagar, Kengeri, Peenya, Thanisandra), ಸಿದ್ದಾರ್ಥನಗರ, ದಾಸರಹಳ್ಳಿ, ಮಂಜುನಾಥನಗರ, ಮಹಾಲಕ್ಷ್ಮೀ ನಗರ, ಬಾಗಲಗುಂಟೆ, ಚಿಕ್ಕಪೇಟೆ, ಹೊಸಕೆರೆಹಳ್ಳಿ, ಬಸವೇಶ್ವರನಗರ, ಬಾಪೂಜಿನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ನೀರಿನ ಪೂರೈಕೆ ಪ್ರಮಾಣವನ್ನು ಕಡಿತಗೊಳಿಸಲಾಗಿದೆ. ವಾರಕ್ಕೆ ಎರಡು ಬಾರಿ ನೀರು ಪೂರೈಸುತ್ತಿದ್ದ ಕಡೆ ಒಂದು ಬಾರಿ ಮಾತ್ರ ಬಿಡಲಾಗುತ್ತಿದೆ. ಎರಡು ಗಂಟೆಗಳ ಅವಧಿಯನ್ನು ಕಡಿಮೆ ಮಾಡಿ, 45 ನಿಮಿಷ ಮಾತ್ರ ನೀರು ಬಿಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಈ ಬಾರಿಯ ಬೇಸಿಗೆ ಹಿಂದೆಂದಿಗಿಂತಲೂ ಹೆಚ್ಚು ಸುಡುತ್ತಿದೆ. ದಿನನಿತ್ಯದ ಉಷ್ಣಾಂಶ 30 ಡಿಗ್ರಿಗಿಂತ ಕೆಳಗೆ ಇಳಿದಿಲ್ಲ. ಬೆಂಗಳೂರಿಗೆ ಪ್ರತಿದಿನ 1,860 ಮಿಲಿಯನ್ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದ್ದು, ಇನ್ನೂ 1680 ಮಿಲಿಯನ್ ಲೀಟರ್ (Million Litres) ನೀರು ಅವಶ್ಯಕತೆ ಇದೆ.ಅಂತರ್ಜಲ ಮಟ್ಟ ಕುಸಿತ ಸೇರಿದಂತೆ ನಾನಾ ಕಾರಣಗಳಿಂದ ಬೆಂಗಳೂರಿನಲ್ಲಿ ಫೆಬ್ರುವರಿಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ನೀರಿನ ಅಭಾವ ಇರುವ ಕಾರಣ ಬೆಂಗಳೂರಿನ ಬಹುತೇಕ ಪ್ರದೇಶದ ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಸಮಯ ನಿಗದಿ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಮುಂದೆ ಬೋರ್ಡ್ಗಳನ್ನು ಅಳವಡಿಸಿ ನೀರಿನ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ.
ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುವ ಸಮಸ್ಯೆಯನ್ನು ಬಗೆಹರಿಸಲು ಬೆಂಗಳೂರು ಜಲಮಂಡಳಿ ವಿಫಲವಾಗಿರುವುದು ಎದ್ದು ಕಾಣುತ್ತಿದೆ. ನೂರು ಕಿ.ಮೀ.ಗಿಂತಲೂ ಹೆಚ್ಚು ದೂರದ ಕಾವೇರಿ ನದಿಯಿಂದ ಪಂಪ್ ಮಾಡಿ 1000 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ತರಲಾಗುತ್ತಿದೆ. ಈ ನೀರನ್ನೇ ಬೆಂಗಳೂರು (Bengaluru) ಬಹುವಾಗಿ ಆಶ್ರಯಿಸಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಮಳೆ ಕಡಿಮೆಯಾಗಿದ್ದು, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ.
ಕಳೆದ ಒಂದು ತಿಂಗಳಲ್ಲಿ ಟ್ಯಾಂಕರ್ (Tanker) ನೀರಿನ ಬೆಲೆ ದುಪ್ಪಟ್ಟಾಗಿದೆ. ಜನವರಿ ಆರಂಭದಲ್ಲಿ ಒಂದು ಟ್ಯಾಂಕರ್ ನೀರಿನ ಬೆಲೆ 700-800 ರೂಪಾಯಿ ಇದ್ದದ್ದು, ಈಗ 2000 ರೂ. ದಾಟಿದೆ. ಬುಕ್ ಮಾಡಿದ 12 ಗಂಟೆ ಕಾಲ ಟ್ಯಾಂಕರ್ ಗೆ ಕಾಯಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಟ್ಯಾಂಕ್ ಮೂಲಕ ನೀರು ಪೂರೈಕೆ ಮಾಡುವ ಮಾಲೀಕರ ಜೊತೆಯಲ್ಲಿ ಮಂಡಳಿಯ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದು ಕೃತಕವಾಗಿ ನೀರಿನ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ.