ಸಾಕಲು ಸಾಧ್ಯವಾಗದೆ ಫೈರ್ ಹೈಡ್ರೆಂಟ್ಗೆ ಕಟ್ಟಿ, ಬಿಟ್ಟು ಹೋಗಿದ್ದ ಶ್ವಾನಕ್ಕೆ ಸಿಕ್ತು ಅಕ್ಕರೆಯ ಆಶ್ರಯ!

Wisconsin

ಮನಕಲುಕುವ ಬರಹದ ಜೊತೆ ಫೈರ್ ಹೈಡ್ರೆಂಡ್ ಗೆ ನಾಯಿಯನ್ನು ಕಟ್ಟಿ ಬಿಟ್ಟು ಹೋದ ಘಟನೆ ಅಮೆರಿಕಾದ(America) ವಿಸ್ಕಾನ್ಸಿನ್ ನಲ್ಲಿ(Wisconsin) ನಡೆದಿದೆ.

ನಾಯಿಯನ್ನು ಅದರ ಮೆಚ್ಚಿನ ವಸ್ತುಗಳ ಸಮೇತ ಫೈರ್ ಹೈಡ್ರೆಂಟ್ ಗೆ ಕಟ್ಟಿ ಹಾಕಿದ ಫೋಟೋವೊಂದು ಮೇ ತಿಂಗಳ ಆರಂಭದಲ್ಲಿ ಇಂಟರ್ನೆಟ್ ನಲ್ಲಿ ಹರಿದಾಡುತ್ತಿತ್ತು. ನಂತರ ಈ ಫೋಟೋ ಜೊತೆಗೆ ನಾಯಿಯ ಹಿಂದಿನ ಮಾಲೀಕ ಬರೆದಿದ್ದ ಪತ್ರವನ್ನು, ವಿಸ್ಕಾನ್ಸಿನ್ ಹ್ಯೂಮನ್ ಸೊಸೈಟಿ(WHS) ತಮ್ಮ ಫೇಸ್ಬುಕ್ ಪುಟದಲ್ಲಿ ಶೇರ್ ಮಾಡಿತ್ತು. ಶ್ವಾನ ಬಳಿ ಸಿಕ್ಕಿದ್ದ ನೋಟ್ ನಲ್ಲಿ ಅದರ ಮಾಲೀಕ ಬರೆದಿದ್ದು ಇಷ್ಟೇ “ನಾವು ನಮ್ಮ ಸಾಕುನಾಯಿಯನ್ನು ಬಹಳಷ್ಟು ಪ್ರೀತಿಸುತ್ತೇವೆ.

ಆದ್ರೆ ನಮಗೆ ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆಯಿರುವುದರಿಂದ, ಈ ಮುದ್ದು ನಾಯಿಯನ್ನು ಸಾಕಲಾರದೆ ಅನಿವಾರ್ಯವಾಗಿ ಅದನ್ನು ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ ಎಂದು ನಾಯಿಯ ಒಡೆಯ ತನ್ನ ಅಳಲನ್ನು ಪತ್ರದ ಮುಖಾಂತರ ವ್ಯಕ್ತಪಡಿಸಿದ್ದಾನೆ.
ಆದರೆ ಖುಷಿಯ ವಿಷಯ ಏನೆಂದರೆ, ಈ ಹೆಣ್ಣು ನಾಯಿಗೆ 15 ದಿನಗಳಿಗಿಂತ ಕಡಿಮೆ ಸಮಯದಲ್ಲಿಯೇ ಒಂದು ಹೊಸ ಕುಟುಂಬ ಸಿಕ್ಕಿದೆ. ಈ ಬಗ್ಗೆ “ವೀ ರೇಟ್ ಡಾಗ್ಸ್” ಎನ್ನುವ ಪೇಜ್ ಇನ್ಸ್ಟಾಗ್ರಾಮ್ ನಲ್ಲಿ ಈ ರೀತಿ ಹೇಳಿಕೊಂಡಿದೆ. ಈ ಮುದ್ದಾದ ಹೆಣ್ಣುನಾಯಿಯನ್ನು ಅದರ ವಸ್ತುಗಳ ಸಮೇತ ಫೈರ್ ಹೈಡ್ರೆಂಟ್ ಗೆ ಕಟ್ಟಿ ಬಿಟ್ಟು ಹೋದದ್ದು ನಿಮಗೆಲ್ಲ ಕೋಪ ತರಿಸಬಹುದು.

ಆದರೆ ಅದರ ಹಿಂದಿನ ಮಾಲೀಕನ ಪರಿಸ್ಥಿತಿಯನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಆತ ನಿರ್ಲಕ್ಷ್ಯದಿಂದ ಈ ಕೆಲಸ ಮಾಡಿಲ್ಲ, ನಾಯಿಗೆ ಒಳ್ಳೆಯ ಕಡೆ ಜಾಗ ಸಿಗಲಿ ಎಂದು ಎಲ್ಲರೂ ತಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದಾರೆ ಎಂದು ಬರೆದುಕೊಂಡಿದೆ. ಇದರ ಜೊತೆಗೆ ಒಂದು ಖುಷಿಯ ವಿಚಾರವನ್ನೂ ತಿಳಿಸಿದೆ, ಅದೇನೆಂದ್ರೆ, ನಾಯಿಯನ್ನು ಹೋದ ಗುರುವಾರ ದತ್ತು ತೆಗೆದುಕೊಳ್ಳಲಾಗಿದೆ, ಈ ನಿರ್ಧಾರದಿಂದ ಅದರ ಹಿಂದಿನ ಮಾಲೀಕರಿಗೆ ನಿಜವಾಗಿಯೂ ಮನಶಾಂತಿ ಸಿಗಲಿದೆ ಎಂದು ಈ ಪೇಜ್ ನಲ್ಲಿ ಹೇಳಲಾಗಿದೆ.


ಈ ನಾಯಿಯ ಫೋಟೋ ವೈರಲ್ ಆಗುತ್ತಿದ್ದಂತೆ, WHS ತನ್ನ ಫೇಸ್ಬುಕ್ ಪುಟದಲ್ಲಿ ಹೀಗೆ ಬರೆದುಕೊಂಡಿದೆ. “ನಾಯಿಗೆ ಒಂದು ಒಳ್ಳೆಯ ವ್ಯವಸ್ಥೆ ಆದ ನಂತರ, ನಾವು ಅದರ ಹಿಂದಿನ ಮಾಲೀಕರನ್ನು ನೇರವಾಗಿ ಭೇಟಿ ಮಾಡಲು ಬಯಸಿದೆವು. ಅವರನ್ನು ಭೇಟಿ ಮಾಡಿ, ನಿಮಗೆ ನಿಮ್ಮ ಮುದ್ದಿನ ನಾಯಿಯಿಂದ ದೂರವಾಗುವ ಸಂದರ್ಭ ಬಂದದ್ದಕ್ಕೆ ನಾವು ವಿಷಾದಿಸುತ್ತೇವೆ. ಆದರೆ ನೀವು ಅದಕ್ಕೆ ಒಳ್ಳೆಯದಾಗಲಿ ಅಂತ ನಿಮ್ಮ ಕೈಲಾದಷ್ಟು ಪ್ರಯತ್ನ ಮಾಡಿದ್ದೀರಿ. ನೀವು ನಾಯಿಯ ಜೊತೆ ಇಟ್ಟ ಬ್ಯಾಗ್ ನಲ್ಲಿ ಅದರ ಅಚ್ಚುಮೆಚ್ಚಿನ ವಸ್ತುಗಳಿದ್ದವು, ಇಷ್ಟು ಸಾಕು ನಾಯಿಯ ಬಗೆಗಿನ ನಿಮ್ಮ ಪ್ರೀತಿಯನ್ನು ಅರ್ಥಮಾಡಿಕೊಳ್ಳಲು.

ನಿಮ್ಮ ನಾಯಿಗೆ ಒಳ್ಳೆಯ ಭವಿಷ್ಯ ಸಿಕ್ಕಿದೆ” ಎಂದು ಮಾಲೀಕರಿಗೆ ಪರೋಕ್ಷವಾಗಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಏನೇ ಆದರೂ ಈ ಮುದ್ದು ನಾಯಿಗೆ ಒಳ್ಳೆಯ ಆಶ್ರಯ ದೊರೆತಿದ್ದು, ಪ್ರಾಣಿ ಪ್ರಿಯರು ಸೇರಿದಂತೆ ಎಲ್ಲರಿಗೂ ಸಂತಸದ ಸಂಗತಿ ಎಂದೇ ಹೇಳಬಹುದು.

Exit mobile version