ವಿದ್ಯಾರ್ಥಿನಿಯರ ಬೀದಿ ಜಗಳ ; ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ? ಪೋಷಕರು ಹಾಗೂ ಶಿಕ್ಷಕರು ತಪ್ಪದೇ ಓದಿ !

Bishop

ಬೆಂಗಳೂರು : ಕಳೆದ ಮಂಗಳವಾರ ಬೆಂಗಳೂರಿನ(Bengaluru)ಬಿಷಪ್ ಕಾಟನ್ ಶಾಲೆಯ(Bishop Cotton Girls School) ವಿದ್ಯಾರ್ಥಿನಿಯರು ನಡುರಸ್ತೆಯಲ್ಲೇ ಜುಟ್ಟು ಹಿಡಿದು ಹೊಡೆದಾಡಿರುವ ಘಟನೆ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಮಾಡಿದೆ.

ಹೌದು, ಇದೊಂದು ಘಟನೆ ಸಂಬಂಧಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಹರಿದಾಡುತ್ತಿದ್ದಂತೆ, ನಮ್ಮ ರಾಜ್ಯವಲ್ಲದೇ ಹೊರ ರಾಜ್ಯದ ನೆಟ್ಟಿಗರು ಕೂಡ ವೀಕ್ಷಿಸಿ, ವಿದ್ಯಾರ್ಥಿನಿಯರ ಈ ಒಂದು ಹುಚ್ಚಾಟದ ಕಿತ್ತಾಟಕ್ಕೆ ಮನಬಂದಂತೆ ಬೈಗುಳ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪ್ರತಿದಿನ ಒಂದೊಂದು ರೀತಿಯಲ್ಲಿ ವಿವಾದಗಳು, ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತದೆ. ಆದ್ರೆ, ಒಂದೊಳ್ಳೆ ಕಾರಣಕ್ಕೆ ಅಥವಾ ನಮ್ಮ ಭಾಷೆ, ನಾಡು-ನುಡಿ, ಸಂಸ್ಕೃತಿ, ಆಚಾರ-ವಿಚಾರ, ಭಾವನೆಗಳಿಗೆ ಧಕ್ಕೆ ತರುವಂತ ಸಂಗತಿಗೆ ಇಂಥ ಜಗಳ ಹುಟ್ಟಿಕೊಂಡಿದ್ದರೇ ಖಂಡಿತ ಜನಸಾಮಾನ್ಯರು ಹೋಗಲಿ ಬಿಡಿ ಕ್ಷಮಿಸೋಣ ಎಂದು ಬುದ್ದಿ ಹೇಳುತ್ತಿದ್ದರು.

ಆದ್ರೆ, ಇಲ್ಲಿ ನಡೆದಿರುವ ಘಟನೆ ಮೇಲ್ಕಂಡ ಯಾವುದೇ ವಿಷಯಕ್ಕೂ ಸಂಬಂಧಿಸಿಲ್ಲ! ಮುಖ್ಯವಾಗಿ ಹತ್ತಿರವೂ ಸುಳಿದಿಲ್ಲ. ಒಬ್ಬ ಹುಡುಗನ ವಿಚಾರಕ್ಕಾಗಿ ಎರಡು ಶಾಲೆಯ ಹುಡುಗಿಯರ ಗುಂಪು ಬೇಸ್ ಬಾಲ್ ಬ್ಯಾಟ್, ಹಾಕಿ ಸ್ಟಿಕ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಹಿಡಿದು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿರುವುದು ತೀರ ಅವಮಾನಕರ ಸಂಗತಿ. ಈ ಘಟನೆಯ ವಿವರ ಜೊತೆಗೆ, ಈ ಘಟನೆಯಿಂದ ತಿಳಿಯಬೇಕಾದ ಪ್ರಮುಖ ಅಂಶಗಳು ಏನು? ಮುಂದಿನ ದಿನಗಳಲ್ಲಿ ಶಿಕ್ಷಣ ಮಂಡಳಿ, ಪೋಷಕರು ತೆಗೆದುಕೊಳ್ಳಬೇಕಾದ ಧೃಢ ನಿರ್ಧಾರವೇನು? ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಮುಂದೆ ಓದಿ.

ಘಟನೆಯ ಸಂಪೂರ್ಣ ವಿವರ : ಬೆಂಗಳೂರಿನಲ್ಲಿರುವ ಹೆಸರಾಂತ, ಪ್ರತಿಷ್ಠಿತ ಶಾಲೆಗಳಲ್ಲಿ ಬಿಷಪ್ ಕಾಟನ್ ಶಾಲೆ ಕೂಡ ಒಂದು. ಬಿಷಪ್ ಕಾಟನ್ ಶಾಲೆಯಲ್ಲಿ ಹುಡುಗ-ಹುಡುಗಿ ಇಬ್ಬರಿಗೂ ಒಂದೇ ಶಾಲೆ-ತರಗತಿಗಳಿಲ್ಲ. ಬಿಷಪ್ ಕಾಟನ್ ಬಾಯ್ಸ್ ಶಾಲೆ ಮತ್ತು ಬಿಷಪ್ ಕಾಟನ್ ಗಲ್ರ್ಸ್ ಶಾಲೆ ಎಂದು ವಿಭಜನೆಗೊಂಡಿದೆ. ಬಿಷಪ್ ಕಾಟನ್ ಶಾಲೆಯ ವಿದ್ಯಾರ್ಥಿನಿಯರ ಗುಂಪೊಂದು ಮತ್ತೊಂದು ಶಾಲೆಯ ವಿದ್ಯಾರ್ಥಿನಿಯರ ಗುಂಪಿನ ನಡುವೆ ಕಿತ್ತಾಟ ನಡೆಸಿದೆ. ಎರಡು ಗುಂಪಿನ ಹುಡುಗಿಯರು ಒಬ್ಬ ಯೋಗೇಶ್(ತಿಳಿಯದ, ಮಾಹಿತಿ ಇಲ್ಲದ) ಎಂಬ ಹುಡುಗನ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. 
ಈ ಹುಡುಗನಿಗಾಗಿ ಎರಡು ಗುಂಪಿನ ಹುಡುಗಿಯರು ಸಾಮಾಜಿಕ ಮಾಧ್ಯಮದ ಗ್ರೂಪ್ ಚಾಟ್‍ನಲ್ಲಿ ಮಾತಿನ ವಾಗ್ವಾದ ನಡೆಸಿದ್ದಾರೆ. ಈ ಮಾತುಗಳು ವಿಕೋಪಕ್ಕೆ ತಿರುಗಿದ್ದೇ ತಡ, ಶಾಲೆಗೆ ಬಂದ ವೇಳೆ ಎರಡು ಗುಂಪಿನ ವಿದ್ಯಾರ್ಥಿನಿಯರು ಶಾಲೆಯ ಸಮವಸ್ತ್ರ ಧರಿಸಿರುವ ಸಮಯದಲ್ಲಿ ಬೇಸ್ ಬಾಲ್ ಬ್ಯಾಟ್, ಹಾಕಿ ಸ್ಟಿಕ್ ಹಿಡಿಯುವುದಲ್ಲದೇ ಎದುರಾಳಿಯ ಜುಟ್ಟು ಹಿಡಿದು ಹುಡುಗರಂತೆ ನಡುರಸ್ತೆಯಲ್ಲೆ ಬಡಿದಾಡಿಕೊಂಡಿದ್ದಾರೆ. ಇವರ ಜಗಳ ತೀವ್ರವಾದ ಹಿನ್ನೆಲೆ ವಿಠಲ್ ಮಲ್ಯ ರಸ್ತೆ ಜಾತ್ರೆಯಲ್ಲಿ ಸೇರುವ ಜನ ರಾಶಿಯಂತೆ, ನಾ ಮುಂದು-ತಾ ಮುಂದು ಎಂದು ಘಟನೆಯ ವೀಕ್ಷಕರಾದರು. 

ಕೆಲವರು ವಿದ್ಯಾರ್ಥಿನಿಯರ ಈ ಮಾರಮಾರಿ ಕಿತ್ತಾಟವನ್ನು ನೋಡಲಾಗದೆ ಮುಂದೆ ಬಂದು ವಿದ್ಯಾರ್ಥಿನಿಯರನ್ನು ತಡೆಯುವಲ್ಲಿ ಯಶಸ್ವಿಯಾದರು. ಆದ್ರೆ, ಅಷ್ಟರಲ್ಲಿ ಒಬ್ಬ ವಿದ್ಯಾರ್ಥಿನಿಯ ಮೂಗು ಮುರಿದು ರಕ್ತ ನೆಲಕ್ಕೆ ಅಂಟುತ್ತಿತ್ತು, ಅಷ್ಟರ ಮಟ್ಟಿಗೆ ಹೊಡೆದಾಟ ಮಾಡಿಕೊಂಡಿದ್ದರು `ಒಬ್ಬ ಯೋಗೇಶ್’ಗಾಗಿ! ನಿಜಕ್ಕೂ ಕೇಳಲು ಎಷ್ಟು ಅಚ್ಚರಿಯೋ? ಅಷ್ಟೇ ನಾಚಿಕೆಗೇಡು, ಅವಮಾನಕರ ಸಂಗತಿ ಇದು.

ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ನಡೆ ಏನು? : ಈ ಘಟನೆ ಕೆಲ ಗಂಟೆಗಳ ಕಾಲ ಮಾಧ್ಯಮಗಳ ಮುಖವಾಣಿಯಾಗುವುದರ ಜೊತೆಗೆ ಟ್ರೋಲ್ ಪುಟಗಳ ಆಹಾರವಾದ ಬೆನ್ನಲ್ಲೇ ಶಾಲಾ ಆಡಳಿತ ಮಂಡಳಿಗೆ ಕರೆಗಳ ಮಹಾಪೂರವೇ ಹರಿದುಬಂದಿತು. ವಿದ್ಯಾರ್ಥಿನಿಯರ ಈ ಹುಚ್ಚಾಟದ ಕಿತ್ತಾಟವನ್ನು ಗಂಭೀರವಾಗಿ ಆರೋಪಿಸಿದ ಜನಸಾಮಾನ್ಯರು, ಶಾಲೆಯ ಆಡಳಿತ ಮಂಡಳಿ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ತಿದ್ದುವ ನಿಟ್ಟಿನಲ್ಲಿ ಪ್ರಯತ್ನಿಸಿತು. ಆದ್ರೆ, ಶಾಲೆಯ ಆಡಳಿತ ಮಂಡಳಿಯೂ ಏನು ಮಾಡಲಾರದ ಹಂತವನ್ನು ತಲುಪಿದ್ದರಿಂದ ಈ ಪ್ರಶ್ನೆಗಳಿಗೆ ಉತ್ತರಿಸುವ ಶಕ್ತಿ ಅವರಿಗಿರಲಿಲ್ಲ!

ಘಟನೆ ನಡೆದ ಬಳಿಕ ವಿದ್ಯಾರ್ಥಿನಿಯರಿಗೆ ಖುದ್ದಾಗಿ ಬುದ್ದಿ ಹೇಳಿ ಸಮಾಧಾನ ಮಾಡಿದ ಶಾಲಾ ಆಡಳಿತ ಮಂಡಳಿ, ವಿದ್ಯಾರ್ಥಿನಿಯರ ಪೋಷಕರೊಡನೆ ಸಂಭಾಷಣೆ ನಡೆಸಿ ಘಟನೆಯ ಬಿಸಿ ತಾಪಮಾನವನ್ನು ತಂಪು ಮಾಡಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ಕಂಪ್ಲೆಂಟ್ ದಾಖಲಾಗಿಲ್ಲ! ಕಾರಣ ವಿದ್ಯಾರ್ಥಿನಿಯರ ಭವಿಷ್ಯ ಮುಖ್ಯ ಅಲ್ಲವೇ? ಇಷ್ಟೆಲ್ಲಾ ಘಟನೆ ನಡೆದಾಯ್ತು. ಆದ್ರೆ ಇದರಿಂದ ವಿದ್ಯಾರ್ಥಿನಿಯರು ಕಲಿತಿದ್ದು ಏನು? ಇಲ್ಲಿಯವರೆಗೂ ಶಾಲೆಯಲ್ಲಿ ಕಲಿತದ್ದು ಏನು? ಗದ್ಯ-ಪದ್ಯ ಪಾಠಗಳಿಗೆ ಮಾತ್ರ ಸೀಮಿತವಾದರಾ? ಅಥವಾ ಸಮಾಜ, ಸಂಸ್ಕೃತಿ, ಗೌರವ, ಶಿಕ್ಷಣದ ಮೌಲ್ಯ, ಸಭ್ಯತೆ ಇವುಗಳನೆಲ್ಲಾ ಮುರಿದು ಇಂಥ ಘಟನೆಗಳಲ್ಲಿ ಭಾಗಿಯಾಗಿ ಸಮಾಜಕ್ಕೆ ಈ ರೀತಿ ಮಾರ್ಗದರ್ಶನವಾಗುವುದಾ?

ಪೋಷಕರೇ ನೀವು ಅರಿತು ಪಾಲಿಸಬೇಕಾದ ಸಂಗತಿ `ಇದು':

ಮಕ್ಕಳು ಶಾಲೆಗೆ ವಿದ್ಯಾಭ್ಯಾಸ ಪಡೆಯಲು ಹೋಗುತ್ತಿದ್ದಾರೆ ಎಂದು ಅವರನ್ನು ಕುರುಡರಂತೆ ಎಂದಿಗೂ ಕಳಿಸಬೇಡಿ! ಮಕ್ಕಳ ಹಾದಿಯನ್ನು ಪೋಷಕರು ಸೂಕ್ಷ್ಮವಾಗಿ ಗಮನಹರಿಸುವುದು ಅಗತ್ಯ, ಅಲ್ಲ ಅತ್ಯಗತ್ಯ ಎಂಬುದನ್ನು ನೆನಪಿಡಿ! ಶಾಲೆಯಲ್ಲಿ ಓದಲು ಹೋಗುವರು ಯಾವ ವಿಚಾರದ ಬಗ್ಗೆ ಇಂದು ಪ್ರಾಮುಖ್ಯತೆ ನೀಡುತ್ತಿದ್ದಾರೆ? ಯಾವ ವಿಚಾರಗಳನ್ನು ಜೀವನಕ್ಕೆ ಅಳವಡಿಸಿಕೊಳ್ಳುತ್ತಿದ್ದಾರೆ? ಎಂಬುದರ ಬಗ್ಗೆ ಪೋಷಕರಾದ ನೀವು ಸಂಶೋಧಿಸಬೇಕಿದೆ.

ಮಕ್ಕಳ ನೆರಳಾಗಿ ಪೋಷಕರು ಅವರ ಕೆಲಸ-ಕಾರ್ಯಗಳನ್ನು ಹಿಂಬಾಲಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ದೊರಕಿಸಿ ಕೊಡಬೇಕಿದೆ, ಇದೆಲ್ಲದಕ್ಕೂ ಹೆಚ್ಚಾಗಿ ಇಂದು ಎರಡು ವರ್ಷದ ಮಗುವಿನಿಂದ 50 ವರ್ಷದ ಹಿರಿಯರವರೆಗೂ ಆವರಿಸಿಕೊಂಡಿರುವ ಸ್ಮಾರ್ಟ್‍ಫೋನ್ ಎಂಬ ಪೆಡಂಭೂತ, ಇಷ್ಟಕ್ಕೆಲ್ಲಾ ಪ್ರಮುಖ ಕಾರಣ! ಎತ್ತ ಸಾಗುತ್ತಿದೆ ನಮ್ಮ ಸಮಾಜ? ಚಿಕ್ಕ ಮಗು ಕೈಯಲ್ಲಿ ಇಂದು ಮೊಬೈಲ್ ಫೋನ್ ಇದೆ. ಎರಡನೇ ಕ್ಲಾಸ್ ವಿದ್ಯಾರ್ಥಿಯ ಬಳಿಯಿದೆ ಸ್ಮಾರ್ಟ್‍ಫೋನ್. ಸಂಭಾಷಣೆಯ ಅರಿವಿಲ್ಲ, ಸಮಾಜದ ಅರಿವಿಲ್ಲ, ದೇಶ-ಕೋಶಗಳ ಅರಿವಿಲ್ಲ, ಮೌಲ್ಯಗಳ ಅರಿವಿಲ್ಲ, ಭಾವನೆಗಳ ಅರಿವಿಲ್ಲ, ಇವೆಲ್ಲದರ ಬದಲಾಗಿ ಸ್ಮಾರ್ಟ್‍ಫೋನ್ ಒಳ`ಅರಿವು’ ಮಾತ್ರ ಅದ್ಬುತವಾಗಿದೆ.

ಇಂದು ಮಕ್ಕಳ ಕೈಗೆ ಸ್ಮಾರ್ಟ್‍ಫೋನ್ ಬಂದು ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತಿದೆ ಎಂಬುದರಲ್ಲಿ ಅನುಮಾನವೇ ಇಲ್ಲ! ಶಾಲೆಗೆ ಹೋಗುವ ವಿದ್ಯಾರ್ಥಿ ಕೈನಲ್ಲಿ ಇಂದು ಸ್ಮಾರ್ಟ್‍ಫೋನ್, ಅದರೊಳಗೆ ವಾಟ್ಸಾಪ್, ಫೇಸ್‍ಬುಕ್ ಜಾಲಗಳ ಹಿಡಿತ. ಇದು ಮಕ್ಕಳ ವಿದ್ಯಾಭ್ಯಾಸಕ್ಕೆ ಮಾತ್ರವಲ್ಲದೇ, ಅವರ ಜೀವನಕ್ಕೆ ದುಬಾರಿ ಹೊಡೆತ ನೀಡುತ್ತಿದೆ ಎಂಬುದಕ್ಕೆ ಇಂಥ ಅನೇಕ ಘಟನೆಗಳೇ ಜ್ವಲಂತ(Live) ಸಾಕ್ಷಿ! 

ಈಗ ದಿಟ್ಟವಾಗಿ ಯೋಚಿಸಿ ಪೋಷಕರೇ, ನಿಮ್ಮ ಮಕ್ಕಳಿಗೆ ಯಾವ ರೀತಿಯ ಸಭ್ಯತೆ, ಸಂಸ್ಕೃತಿ, ಸಮಾನತೇ, ಗೌರವ, ಶಿಕ್ಷಣದ ಮೌಲ್ಯ, ಆಚಾರ-ವಿಚಾರಗಳನ್ನು ಒಬ್ಬಟ್ಟಿನಲ್ಲಿ ತುಂಬುವ ಊರ್ಣದಂತೆ ತುಂಬುತ್ತೀರಾ? ಅಥವಾ ಇಂಥ ಘಟನೆಗಳು ಮರುಕಳಿಸಲು ಬಿಡ್ತೀರಾ? ಎಂಬುದನ್ನು. ನೀವೆ ನಿರ್ಧರಿಸಿ. ನಿಮ್ಮ ದಿಟ್ಟ ಹೆಜ್ಜೆ, ಧೃಡ ನಿರ್ಧಾರಗಳು ಇಂಥ ಘಟನೆಗಳಿಗೆ ಕಡಿವಾಣ ಹಾಕುವಲ್ಲಿ ಪ್ರಮುಖವಾಗಲಿದೆ.

ಇಂದಿನ `ಶಿಕ್ಷಣದ ಗುಣಮಟ್ಟ’ ಯಾವ ಹಂತ ತಲುಪುತ್ತಿದೆ? : ಈ ಘಟನೆ ಬಳಿಕ ಪ್ರತಿಯೊಬ್ಬರಲ್ಲೂ ಕಾಡುತ್ತಿರುವ ಪ್ರಶ್ನೆ ನಮ್ಮ ಶಿಕ್ಷಣ ಗುಣಮಟ್ಟ ಯಾವ ಹಂತದಲ್ಲಿದೆ? ಯಾಕೆ ಈ ಹಾದಿಯನ್ನು ಹಿಡಿದಿದೆ ಎಂಬುದು. ಈ ಘಟನೆಗಳಿಗೆ ಶಿಕ್ಷಣ ಗುಣಮಟ್ಟವೇ ಪ್ರಮುಖ ಕಾರಣ ಎಂದು ಬೆಟ್ಟು ಮಾಡಿ ತೋರಿಸುವುದು ತಪ್ಪು! ಶಿಕ್ಷಣದ ಗುಣಮಟ್ಟವೂ ಕೂಡ ಒಂದು ಕಾರಣ ಅಷ್ಟೇ! ಅಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಬಾಲ್ಯದ ಹಂತದಿಂದಲೇ ಶಿಕ್ಷಕರು ಮಕ್ಕಳಿಗೆ ಪಠ್ಯ ಭಾಗ ಹೊರತುಪಡಿಸಿ, ಆಗಾಗ ಪಾಠದ ನಡುವೆ ಜೀವನದ ಮೌಲ್ಯ, ಗುರು-ಹಿರಿಯರಿಗೆ ಸಂಭೋದಿಸುವ ವಿಧಾನ, ಮಾತಿನ ಚಾತುರ್ಯತೆ, ಸಭ್ಯತೆ, ಸಂಸ್ಕೃತಿ, ಸಮಾನತೆ ಎಲ್ಲವನ್ನೂ ಅಲ್ಪಾವಧಿಯಲ್ಲಿ ತಿಳಿಸುತ್ತಿದ್ದರು.

ಈ ಬಗ್ಗೆ ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಭದ್ರವಾದ ಅಡಿಪಾಯ(ಹೈಲೈಟ್ ಮಾಡಿರುವ ಸಾಲು) ನೀಡಬೇಕು. ಶಿಕ್ಷಣದ ಗುಣಮಟ್ಟಕ್ಕೆ ಎಂದಿಗೂ ಇಂಥ ಘಟನೆಗಳಿಂದ ಕಪ್ಪು ಚುಕ್ಕೆ ಬಾರದಿರಲಿ ಎಂಬುದು ನಮ್ಮ ಆಶಯ, ನಮ್ಮ ಮನವಿ. ಪೋಷಕರು ಹಾಗೂ ಶಿಕ್ಷಣ ಆಡಳಿತ ಮಂಡಳಿ ಗಮನಹರಿಸಿ, ಈ ಪ್ರಮುಖ ಘಟ್ಟಗಳಲ್ಲಿ(ವಿದ್ಯಾರ್ಥಿಗಳ ವಿದ್ಯಾಭ್ಯಾಸ) ನಿಮ್ಮ ಪಾತ್ರ ಅವರ ಮುಂದಿನ ನಿಲುವಿಗೆ ಭಾರಿ ಪರಿಣಾಮ ಬೀಳಲಿದೆ.
Exit mobile version