ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ; ಅಮೇರಿಕಾವನ್ನೂ ಹಿಂದಿಕ್ಕಿದ ಚೀನಾ, ಭಾರತಕ್ಕೆ ಎಷ್ಟನೆ ಸ್ಥಾನ..?

Bengaluru: ಪ್ರಸ್ತುತ ಜಗತ್ತಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artifical Intelligence) ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದ್ದು, ವಿಶ್ವದ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡುತ್ತಿವೆ. ಅನೇಕ ಸಂಸ್ಥೆಗಳು ಈ ಬಗ್ಗೆ ಸಂಶೋಧನೆಗಳಲ್ಲಿ ನಿರತವಾಗಿವೆ.

ಇನ್ನು ಸದಾ ತಂತ್ರಜ್ಞಾನದಲ್ಲಿ ಮುಂದಿರುವ ಅಮೇರಿಕಾವೇ (America) ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲೂ ಮುಂದಿವೆ ಎನ್ನುವ ಅಭಿಪ್ರಾಯ ಎಲ್ಲರಲ್ಲೂ ಇದೆ. ಆದರೆ ಅಚ್ಚರಿ ಎಂದರೆ, ಅದಕ್ಕೆ ವ್ಯತಿರಿಕ್ತವಾದ ಮಾಹಿತಿ ವರದಿಯೊಂದು ಬಹಿರಂಗವಾಗಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಂಶೋಧನಾ ಕ್ಷೇತ್ರದಲ್ಲಿ ಅಮೆರಿಕವನ್ನೂ ಹಿಂದಿಕ್ಕಿ ಅಗ್ರಸ್ಥಾನವನ್ನು ಚೀನಾ ಪಡೆದುಕೊಂಡಿದೆ. ವರದಿಯೊಂದರ ಪ್ರಕಾರ, ಜಗತ್ತಿನಲ್ಲೇ ಅತಿ ಹೆಚ್ಚು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿ ಪೇಟೆಂಟ್ ಅರ್ಜಿಗಳನ್ನು ಚೀನಾ ದಾಖಲಿಸಿದೆ. ಚೀನಾ ಒಟ್ಟು 1.44 ಲಕ್ಷಕ್ಕೂ ಅಧಿಕ ಪೇಟೆಂಟ್ ಅರ್ಜಿಗಳನ್ನು ಸಲ್ಲಿಸಿದೆ. ಇನ್ನು 35,385 ಪೇಟೆಂಟ್ ಅರ್ಜಿಗಳನ್ನು ಹೊಂದಿರುವ ಅಮೇರಿಕಾ 2ನೇ ಸ್ಥಾನದಲ್ಲಿದ್ದರೆ, 480 ಪೇಟೆಂಟ್ ಅರ್ಜಿಗಳನ್ನು ಹೊಂದಿರುವ ಭಾರತ 16ನೇ ಸ್ಥಾನದಲ್ಲಿದೆ.

ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬೆಳೆದಷ್ಟು ಹಣಕಾಸು ಸಂಸ್ಥೆಗಳಲ್ಲಿ, ಗ್ರಾಹಕ ಸೇವೆ ನೀಡಲು, ವಂಚನೆ ಪತ್ತೆ ಹಚ್ಚಲು, ವಿಪತ್ತು ನಿರ್ವಹಣೆ, ಹೀಗೆ ಅನೇಕ ಕ್ಷೇತ್ರಗಳಲ್ಲಿ ಹೆಚ್ಚು ಉಪಯುಕ್ತವಾಗಿದೆ. ಫೇಷಿಯಲ್ ರೆಕಾಗ್ನಿಷನ್ (Facial recognition),ಆರೋಗ್ಯ, ಔಷಧ ಸಂಶೋಧನೆ, ಸೇಲ್ಸ್ ಕಾಲ್ಸ್ ನಿರ್ವಹಣೆ, ಕೈಗಾರಿಕಾ ತಂತ್ರಜ್ಞಾನ, ಇಂಟರಾಕ್ಟಿವ್ ಸಾಫ್ಟ್ವೇರ್(Interactive Software) ಅಭಿವೃದ್ಧಿ, ರಿಯಲ್ ಎಸ್ಟೇಟ್, ಚಾಟ್ ಬಾಟ್ ಅಭಿವೃದ್ಧಿಗೆ ಇದು ಅನ್ವಯವಾಗಲಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಳಕೆ ಹೆಚ್ಚಳದಿಂದ ಹೆಚ್ಚು ಡೇಟಾ ಸೆಂಟರ್ಗಳ ನಿರ್ಮಾಣವಾಗುವುದಲ್ಲದೆ, ನೈಸರ್ಗಿಕ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ ಸಾಧ್ಯವಾಗಲಿದೆ.

ಅಧಿಕ ಪೇಟೆಂಟ್ ಅರ್ಜಿಗಳನ್ನು ಹೊಂದಿರುವ ದೇಶಗಳ ಪಟ್ಟಿ :
1 ಚೀನಾ 1,44,516
2 ಅಮೆರಿಕ 35,385
3 ಜಪಾನ್ 17,012
4 ದಕ್ಷಿಣ ಕೊರಿಯಾ 16,684
5 ಐರೋಪ್ಯ ಒಕ್ಕೂಟ 11,667
6 ಜರ್ಮನಿ 5,473
7 ತೈವಾನ್ 2,820
8 ಸ್ವಿಟ್ಜರ್ಲೆಂಡ್ 1,127
9 ಯು.ಕೆ 1,049
10 ಕೆನಡಾ 1,017
11 ಫ್ರಾನ್ಸ್ 955
12 ನೆದರ್ಲೆಂಡ್ಸ್ 854
13 ಹಾಂಗ್ಕಾಂಗ್ 811
14 ಸ್ವೀಡನ್ 683
15 ಫಿನ್ಲೆಂಡ್ 604
16 ಭಾರತ 480
17 ಇಸ್ರೇಲ್ 434
18 ಸೌದಿ ಅರೇಬಿಯಾ 334

Exit mobile version