ಕಾಂಗ್ರೆಸ್ ಅಸ್ತ್ರಗಳಿಗೆ ‘ಬಜೆಟ್’ ಬ್ರಹ್ಮಾಸ್ತ್ರ ಬಿಟ್ಟ ಬುದ್ದಿವಂತ ಬೊಮ್ಮಾಯಿ!

state

2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಣಕಾಸು ಲೆಕ್ಕಾಚಾರಗಳ ಜೊತೆ ಜೊತೆಗೆ ರಾಜಕೀಯ ಲೆಕ್ಕಾಚಾರಗಳ ಮುನ್ನೋಟದ ಬಜೆಟ್ ಮಂಡಿಸಿದ್ದಾರೆ.

ಹೌದು, ಸಿಎಂ ಬಸವರಾಜ್ ಬೊಮ್ಮಾಯಿ ಇದೇ ಮೊದಲ ಬಾರಿಗೆ ಮಂಡಿಸಿದ ಈ ಬಜೆಟ್‍ನಲ್ಲಿ ರಾಜಕೀಯ ವಿರೋಧಿಗಳ ಲೆಕ್ಕಾಚಾರಗಳನ್ನು ಸರಿಯಾಗಿಯೇ ಗ್ರಹಿಸಿ ‘ಬಜೆಟ್ ಪ್ರತ್ಯಾಸ್ತ್ರ’ದ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಪ್ರಮುಖ ವಿರೋಧಪಕ್ಷ ಕಾಂಗ್ರೆಸ್‍ನ ಅನೇಕ ರಾಜಕೀಯ ನಡೆಗಳಿಗೆ ಬಜೆಟ್ ಮೂಲಕವೇ ಬೊಮ್ಮಾಯಿ ತಕ್ಕ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ಪ್ರಯೋಗಿಸಿದ ರಾಜಕೀಯ ದಾಳಗಳು ಇದೀಗ ತಲೆಕೆಳಗಾಗಿವೆ.

ನಿನ್ನೆ ವಿಧಾನಸೌಧದಲ್ಲಿ ಕವಿ ಅಡಿಗರ ‘ಸಾಮರಸ್ಯದ ಸಮಭಾವಲಹರಿಯ’ ಸಾಲುಗಳನ್ನು ಹೇಳುತ್ತ, ‘ನವ ಕರ್ನಾಟಕ’ ಧ್ಯೇಯದ ತಮ್ಮ ಹೊಸ ಕನಸುಗಳನ್ನು ಬಿಚ್ಚಿಟ್ಟ ಸಿಎಂ ಬೊಮ್ಮಾಯಿ, ಕಾಂಗ್ರೆಸ್‍ನ ಅನೇಕ ರಾಜಕೀಯ ಲೆಕ್ಕಾಚಾರದ ಕನಸುಗಳನ್ನು ನುಚ್ಚುನೂರು ಮಾಡಿದರು. ಹೌದು, ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ನಾಯಕರು ಈ ಹಿಂದಿಗಿಂತ ಹೆಚ್ಚು ಸಕ್ರಿಯರಾಗಿದ್ದಾರೆ. ಆಡಳಿತ ರೂಢ ಬಿಜೆಪಿಗೆ ಸವಾಲುಗಳನ್ನು ಎಸೆಯುತ್ತಾ, ಪಕ್ಷ ಸಂಘಟನೆ ಮತ್ತು ಜನಾಭಿಪ್ರಾಯ ರೂಪಿಸುವ ಕಡೆಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಆಡಳಿತ ಪಕ್ಷವನ್ನು ಹಣಿಯಲು ಸಿಗುವ ಅವಕಾಶಗಳನ್ನು ಪ್ರಯೋಗಿಸಿಕೊಳ್ಳುವ ಜಾಣ ನಡೆಯನ್ನು ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ್ದರು. ಆದರೆ ಕಾಂಗ್ರೆಸ್ ನಾಯಕರ ಜಾಣ ನಡೆಗೆ ‘ಬುದ್ದಿವಂತ ಬೊಮ್ಮಾಯಿ’ ಸದ್ದಿಲ್ಲದೇ ಉತ್ತರ ನೀಡಿದ್ದಾರೆ.

ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆ ದೃಷ್ಠಿಯಿಂದ ಮತ್ತು ಬಿಜೆಪಿಗೆ ನುಂಗಲಾರದ ತುತ್ತಾಗುವ ಮೇಕೆದಾಟು ಯೋಜನೆಯನ್ನು ಕಾಂಗ್ರೆಸ್ ನಾಯಕರು ಮುನ್ನಲೆಗೆ ತಂದು, ಪಾದಯಾತ್ರೆಯ ಮೂಲಕ ಬಿಜೆಪಿಗೆ ‘ಚೆಕ್‍ಮೆಟ್’ ನೀಡಿದರು. ಆದರೆ ಇದೀಗ ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಮೇಕೆದಾಟು ಯೋಜನೆಗೆ 1000 ಕೋಟಿ ರೂ. ಅನುದಾನ ನೀಡುವ ಮೂಲಕ ಕಾಂಗ್ರೆಸ್ ಲೆಕ್ಕಾಚಾರಗಳನ್ನು ಹುಸಿಗೊಳಿಸಿದರು. ಇನ್ನು ಕೇಂದ್ರ ಬಿಜೆಪಿ ಸರ್ಕಾರ ಕೇರಳ ರಾಜ್ಯ ಕಳುಹಿಸಿದ ಶ್ರೀನಾರಾಯಣ ಗುರುಗಳ ಸ್ತಂಭ್ದಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‍ಗೆ ಆಯ್ಕೆ ಮಾಡದ ವಿಷಯವನ್ನು ಇಟ್ಟುಕೊಂಡು, ಕರಾವಳಿ ಭಾಗದ ಅನೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡುವ ಮೂಲಕ ಈಡಿಗ ಸಮುದಾಯವನ್ನು ಓಲೈಸುವ ಅಸ್ತ್ರ ಪ್ರಯೋಗಿಸಿತು. ಆದರೆ ಇದೀಗ ಕರಾವಳಿಯ ಮೂರು ಜಿಲ್ಲೆಗಳು ಮತ್ತು ಶಿವಮೊಗ್ಗದಲ್ಲಿ ‘ಶ್ರೀನಾರಾಯಣ ಗುರು ವಸತಿ ಶಾಲೆ’ಗಳನ್ನು ಆರಂಭಿಸುವ ಪ್ರಸ್ತಾವನೆಯನ್ನು ಬಜೆಟ್‍ನಲ್ಲಿ ಘೋಷಿಸಲಾಗಿದೆ.

ಈ ಮೂಲಕ ಈ ನಾಲ್ಕು ಜಿಲ್ಲೆಗಳಲ್ಲಿ ಪ್ರಾಬಲ್ಯ ಹೊಂದಿರುವ ಈಡಿಗ ಸಮುದಾಯವನ್ನು ಓಲೈಸುವ ಬಜೆಟ್ ಲೆಕ್ಕಾಚಾರಕ್ಕೆ ಬಿಜೆಪಿಯೂ ಕೈಹಾಕಿದೆ. ಅದೇ ರೀತಿ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ಘಟನೆಯೂ ರಾಜ್ಯದಲ್ಲಿ ದಲಿತ ಸಮುದಾಯವನ್ನು ಕೆರಳಿಸಿತ್ತು. ಸರ್ಕಾರ ಈ ವಿಷಯದಲ್ಲಿ ‘ಜಾಣ ಕುರುಡುತನ’ ಪ್ರದರ್ಶಿಸುತ್ತಿದೆ ಮತ್ತು ದಲಿತ ಸಮುದಾಯದ ಅಭಿವೃದ್ದಿಗೆ ಯಾವುದೇ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ರೂಪಿಸಿಲ್ಲ ಎಂದು ವಿರೋಧಪಕ್ಷದ ನಾಯಕರು ‘ದಲಿತ ಅಭಿವೃದ್ದಿ ಅಸ್ತ್ರ’ ಪ್ರಯೋಗಿಸಿದ್ದರು. ಆದರೆ ಇದೀಗ ಬಜೆಟ್‍ನಲ್ಲಿ 100 ‘ಅಂಬೇಡ್ಕರ್ ವಸತಿ ನಿಲಯ’ಗಳ ಘೋಷಣೆ ಮತ್ತು ಅಸ್ಪøಶ್ಯತೆ ನಿವಾರಣೆಗೆ ‘ವಿನಯ ಸಾಮರಸ್ಯ ಯೋಜನೆ’ ಮೂಲಕ ದಲಿತ ಸಮುದಾಯದ ಮತಬುಟ್ಟಿಗೆ ಬಿಜೆಪಿ ಕೈ ಹಾಕಿದೆ.

ಕಾಂಗ್ರೆಸ್ ನಾಯಕರಿಗೆ ತಕ್ಕ ಉತ್ತರ ನೀಡುವುದರ ಜೊತೆಗೆ ಸ್ವಪಕ್ಷೀಯರ ಮನತಣಿಸುವ ಕಾರ್ಯವನ್ನು ಸಿಎಂ ಬೊಮ್ಮಾಯಿ ಮರೆತಿಲ್ಲ. ವೀರಶೈವ ಅಭಿವೃದ್ದಿ ನಿಗಮ ಮತ್ತು ಒಕ್ಕಲಿಗರ ಅಭಿವೃದ್ದಿ ನಿಗಮಗಳಿಗೆ ತಲಾ 100 ಕೋಟಿ, ಮರಾಠ ಅಭಿವೃದ್ದಿ ನಿಗಮಕ್ಕೆ 50 ಕೋಟಿ, ಕೊಡವರ ಅಭಿವೃದ್ದಿಗಾಗಿ 10 ಕೋಟಿ ರೂ. ಮೀಸಲಿಟ್ಟಿದ್ದಾರೆ. ಅದೇ ರೀತಿ ‘ಸಂಘ’ದ ಆಶಯಕ್ಕೆ ಪೂರಕವಾಗಿ, ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವುದು, ‘ಪುಣ್ಯಕೋಟಿ ದತ್ತು ಯೋಜನೆ’, ‘ಗೋಮಾತಾ ಸಹಕಾರ ಸಂಘ’ ಸೇರಿದಂತೆ ಅನೇಕ ಹೊಸ ಯೋಜನೆಗಳನ್ನು ಸಿಎಂ ಬೊಮ್ಮಾಯಿ ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಒಟ್ಟಾರೆಯಾಗಿ ಸಿಎಂ ಬೊಮ್ಮಾಯಿ ಅವರು ಮಂಡಿಸಿದ ಬಜೆಟ್ ಎಲ್ಲ ಸಮುದಾಯಗಳ ಅಭಿವೃದ್ದಿಯ ಆಶಯವನ್ನು ಹೊಂದಿದ್ದರು, ರಾಜಕೀಯ ಲೆಕ್ಕಾಚಾರಗಳನ್ನು ಮಾತ್ರ ಮರೆತಿಲ್ಲ.
Exit mobile version