ಭಯಾನಕ ಭೂಕಂಪ: ಬೆಳ್ಳಂಬೆಳಿಗ್ಗೆ ಗಡ ಗಡ ನಡುಗಿದ ತೈವಾನ್‌, ಭೂಕಂಪನದ ಬೆನ್ನಲ್ಲೇ ಸುನಾಮಿ ಎಚ್ಚರಿಕೆ!

Taiwan: ತೈವಾನ್‌ನಲ್ಲಿ (Taiwan) ಬುಧವಾರ ಬೆಳಿಗ್ಗೆ ಭಾರೀ ಪ್ರಮಾಣದಲ್ಲಿ ಭೂಕಂಪ ಸಂಭವಿಸಿದ್ದು, ಕಳೆದ 25 ವರ್ಷಗಳಲ್ಲಿಯೇ ಅತ್ಯಂತ ಪ್ರಬಲ ಭೂಕಂಪನ ಎಂದು ಹೇಳಲಾಗಿದೆ. ಇದರ ಪರಿಣಾಮದಿಂದಾಗಿ ತೈವಾನ್, ಜಪಾನ್ ಹಾಗೂ ಫಿಲಿಫೈನ್ಸ್ (Philippines) ದೇಶಗಳ ವಿವಿಧ ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಪೂರ್ವ ತೈವಾನ್‌ನಲ್ಲಿ 7.4 ತೀವ್ರತೆಯ ಭೂಕಂಪನ (Earthquake) ಸಂಭವಿಸಿದ್ದು, ತೈವಾನ್ ದ್ವೀಪ ರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಭೂಮಿ ನಡುಗಿದೆ. ಮುಂದಿನ ಮೂರು ನಾಲ್ಕು ದಿನಗಳಲ್ಲಿ ತೈವಾನ್‌ನಲ್ಲಿ ಮತ್ತಷ್ಟು ಭಾರಿ ಭೂಮಿ ಕಂಪಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಹುವಾಲಿಯೆನ್‌ನಲ್ಲಿ ಐದು ಮಹಡಿಯ ಕಟ್ಟಡವೊಂದು 45 ಡಿಗ್ರಿ ಕೋನದಲ್ಲಿ ವಾಲಿರುವ ಚಿತ್ರ ವೈರಲ್ (Viral) ಆಗಿದ್ದು, ತೈವಾನ್‌ನ ಎಲ್ಲಾ ಕಡೆ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತೈವಾನ್‌ನ ಹುವಾಲಿಯೆನ್ ನಗರದ ದಕ್ಷಿಣ ಭಾಗದಿಂದ 18 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದ್ದು, 34.8 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ (America Geological) ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.

ಜಪಾನ್‌ನ (Japan) ಹವಾಮಾನ ಇಲಾಖೆಯು, ಮಿಯಾಕೊಜಿಮಾ ದ್ವೀಪ ಸೇರಿದಂತೆ ಜಪಾನ್‌ನ ದೂರದ ದ್ವೀಪಗಳಲ್ಲಿ 10 ಅಡಿ ಎತ್ತರದವರೆಗೂ ಸುನಾಮಿ ಅಲೆಗಳು ಸಿಡಿಯುವ ಎಚ್ಚರಿಕೆ ನೀಡಿದೆ. ಭೂಕಂಪನದ ಬಳಿಕ ಯೊನಗುನಿ ದ್ವೀಪದಲ್ಲಿ 1 ಅಡಿ ಎತ್ತರದವರೆಗೂ ಅಲೆಗಳು ಎದ್ದಿವೆ.

ಕರಾವಳಿ ಪ್ರದೇಶಗಳ ಜನರು ಬಹಳ ಎಚ್ಚರಿಕೆಯಿಂದ ಇರುವಂತೆ ಮತ್ತು ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಹಾಗೂ ಹಠಾತ್ ಅಲೆಗಳ ಹೆಚ್ಚಳದಿಂದ ಎದುರಾಗಬಹುದಾಗಿ ಅಪಾಯಗಳ ಬಗ್ಗೆ ಜಾಗ್ರತೆ ವಹಿಸುವಂತೆ ನೆನಪಿಸಲಾಗುತ್ತಿದೆ ಎಂದು ಜನರ ಮೊಬೈಲ್‌ಗಳಿಗೆ ಮೆಸೇಜ್‌ಗಳ ಮೂಲಕ ಸುನಾಮಿ (Tsunami) ಎಚ್ಚರಿಕೆ ರವಾನಿಸಿದ್ದಾರೆ.

1999ರ ಸೆಪ್ಟೆಂಬರ್‌ನಲ್ಲಿ (September) ಉಂಟಾಗಿದ್ದ 7.6 ತೀವ್ರತೆಯ ಭೂಕಂಪನವು 2,400 ಜನರ ಜೀವ ಬಲಿ ತೆಗೆದುಕೊಂಡಿತ್ತು. ಇದು ದ್ವೀಪ ರಾಷ್ಟ್ರದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ನೈಸರ್ಗಿಕ ಅವಘಡ ಎನಿಸಿದೆ.

ಭವ್ಯಶ್ರೀ ಆರ್ ಜೆ

Exit mobile version