Ahmedabad: ಗುಜರಾತ್ನ (Gujarat) ಖೇಡಾ ಜಿಲ್ಲೆಯ ನಡಿಯೆಡ್ ಎಂಬಲ್ಲಿ ಕಲುಷಿತ ಆಯುರ್ವೇದಿಕ್ ಸಿರಪ್ (Ayurvedic Syrup) ಸೇವಿಸಿ ಕಳೆದೆರಡು ದಿನಗಳಲ್ಲಿ ಕನಿಷ್ಠ ಐದು ಮಂದಿ ಮೃತಪಟ್ಟಿದ್ದಾರೆ ಹಾಗೂ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
“ಕಲ್ಮೇಘಸವ್-ಅಸವ ಅರಿಷ್ಟʼ (Kalmeghasav-asava arista) ಎಂಬ ಹೆಸರಿನ ಈ ಆಯುರ್ವೇದಿಕ್ ಸಿರಪ್ ಅನ್ನು ನಡಿಯೆಡ್ ಪಟ್ಟಣದ ಬಿಲೋದರ ಗ್ರಾಮದ ಅಂಗಡಿಯಲ್ಲಿ ಸುಮಾರು 50 ಜನರಿಗೆ ಓವರ್ ದಿ ಕೌಂಟರ್ (Over The Counter) ಮಾರಾಟ ಮಾಡಲಾಗಿತ್ತು, ಈ ಸಿರಪ್ನಲ್ಲಿ ವಿಷಕಾರಿ ಮಿಥೈಲ್ ಆಲ್ಕೋಹಾಲ್ ಅಂಶವಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಗ್ರಾಮಸ್ಥರೊಬ್ಬರ ರಕ್ತದ ಮಾದರಿ ಪರೀಕ್ಷಿಸಿದಾಗ ಮಾರಾಟ ಮಾಡುವ ಮುನ್ನ ಸಿರಪ್ಗೆ ಮಿಥೈಲ್ ಆಲ್ಕೋಹಾಲ್ (Methyl Alcohol) ಸೇರಿಸಿದ್ದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅಂಗಡಿ ಮಾಲಕ ಸಹಿತ ಮೂವರನ್ನು ವಶಕ್ಕೆ ಪಡದು ಪ್ರಶ್ನಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಂಗಡಿ ಮಾಲೀಕ ಕಿಶನ್ ಸೋಧಾ (Kishan Sodha) ಅವರು ಕಳೆದ ಒಂದು ವಾರದಲ್ಲಿ ಸುಮಾರು 50 ಜನರಿಗೆ ಸಿರಪ್ ಬಾಟಲಿಗಳನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಅವರು ಅವುಗಳನ್ನು 100 ರೂ.ಗೆ ಖರೀದಿಸಿದರು ಮತ್ತು 130 ರೂ.ಗೆ ಮಾರಾಟ ಮಾಡಿದರು ಎಂದು ತಿಳಿದು ಬಂದಿದೆ.
“ಕಿಶನ್ ತಂದೆ ಸಂಕಲಭಾಯ್ ಮತ್ತು ಬಿಲೋದರದ ಇನ್ನೊಬ್ಬ ನಿವಾಸಿ ಬಲ್ದೇವ್ ಸೋಧಾ (Baldev Sodha) ಕೂಡ ಈ ಸಿರಪ್ ಅನ್ನು ಸೇವಿಸಿದ್ದು, ಇನ್ನುಳಿದ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಕಲಭಾಯ್ (Sankal Bhai) ಅವರ ರಕ್ತ ಪರೀಕ್ಷೆಯಲ್ಲಿ ಮಿಥೈಲ್ ಆಲ್ಕೋಹಾಲ್ ಇರುವುದು ಧೃಡಪಟ್ಟಿದ್ದು, ಸಿರಪ್ ನಲ್ಲಿ ರಾಸಾಯನಿಕವನ್ನು ಸೇರಿಸಲಾಗಿದೆ. ಅದನ್ನು ಯಾವ ಹಂತದಲ್ಲಿ ಸೇರಿಸಲಾಗಿದೆ ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಾಗಿದೆ ಎಂದು ಎಸ್ಪಿ ಹೇಳಿದರು.
ಭವ್ಯಶ್ರೀ ಆರ್ ಜೆ