ರಾಜ್ಯದಲ್ಲಿ ಅಕ್ರಮವಾಗಿ ಗಾಂಜಾ ಮಾರುವವರ ಸಂಖ್ಯೆ ಏನು ಕಡಿಮೆಯಿಲ್ಲ. ಗಾಂಜಾ ಮಾರಾಟ ಒಂದಲ್ಲ ಒಂದು ರೀತಿ ಯಾವುದೇ ಅಡೆತಡೆಯಿಲ್ಲದೆ ಮಾರಾಟವಾಗುತ್ತಿದೆ. ಈ ಹಿಂದೆ ಎಷ್ಟೋ ಬಾರಿಗೆ ಗಾಂಜಾ ಪ್ರಕರಣಗಳು ಬಯಲಿಗೆ ಬಂದಿವೆ. ಆದರೂ ಕೂಡ ಇದಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಬೀಳುತ್ತಿಲ್ಲ. ಕಾರಣ, ಅಕ್ರಮವಾಗಿ ಪೊಲೀಸರ ಕಣ್ತಪ್ಪಿಸಿ ಮಾರಾಟ ಮಾಡಲಾಗುತ್ತಿದೆ. ಅದೇ ಹಾದಿಯಲ್ಲಿ ಮಾರಾಟ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ನಿವಾಸಿ ಈಗ ಸೆರೆಗೆ ಸಿಕ್ಕಿರುವ ಆರೋಪಿಯಾಗಿದ್ದಾನೆ.
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ಆರ್.ಟಿ ನಗರದ ನಿವಾಸದ ಬಳಿ ಬೀಡಾ ಅಂಗಡಿಯನ್ನು ಇಟ್ಟುಕೊಂಡಿದ್ದ ಈ ವ್ಯಕ್ತಿ, ಯಾರಿಗೂ ತಿಳಿಯದಂತೆ ಪೊಲೀಸರ ಕಣ್ತಪ್ಪಿಸಿ ಗಾಂಜಾವನ್ನು ಚಾಕಲೇಟ್ ಕವರ್ ನಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದನಂತೆ. ಚಾಕಲೇಟ್ ಕವರ್ ನಲ್ಲಿ ಗಾಂಜಾ ಗುಳಿಗೆ ಉಂಡೆ ಆಕಾರದಲ್ಲಿ ಕಟ್ಟಿ, ಅದನ್ನು 50 ರಿಂದ 100 ರೂಪಾಯಿಯವರೆಗೆ ಮಾರುತ್ತಿದ್ದನಂತೆ ಈ ಭೂಪ. ಯಾರಿಗೂ ಗೊತ್ತಾಗದಂತೆ ಗಾಂಜಾ ಖರೀದಿದಾರರಿಗೆ ಇದರ ಬಗ್ಗೆ ಮಾಹಿತಿ ನೀಡಿ ಅದನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದ. ಸದ್ಯ ಈತನ ಕಣ್ಣಾಮುಚ್ಚಾಲೆ ಆಟ ಬಯಲಿಗೆ ಬಂದಿದ್ದು, ಪೊಲೀಸರು ಈ ಆರೋಪಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.
ಆರೋಪಿ ಗಾಂಜಾ ಉಂಡೆಗಳನ್ನು ಉತ್ತರ ಪ್ರದೇಶದಿಂದ ತಂದು `ಸಾಯ್’ ಎಂಬ ಲೋಕಲ್ ಹೆಸರಿನ ಚಾಕ್‍ಲೇಟ್ ಒಳಗೆ ಇಟ್ಟು ಮಾರಾಟ ಮಾಡುತ್ತಿದ್ದ, ಸದ್ಯ ಈಗ ಈ ಆರೋಪಿಯನ್ನು ಪೊಲೀಸರು ಸೆರೆಹಿಡಿದು ವಿಚಾರಣೆ ಆರಂಭಿಸಿದ್ದಾರೆ. ಈಗಾಗಲೇ 5 ಕೆಜಿ ಗಾಂಜಾ ಗುಳಿಗೆಗಳನ್ನು ವಶಕ್ಕೆ ಪಡೆಯಲಾಗಿದೆ.