Cuttack: ಚೈತ್ರಾ ಕುಂದಾಪುರ (Chaitra Kundapura) ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಮೂರನೇ ಆರೋಪಿಯಾಗಿರುವ ವಿಜಯನಗರ ಜಿಲ್ಲೆಯ ಹಿರೇಹಡಗಲಿ ತಾಲೂಕಿನ ಅಭಿನವ ಹಾಲಶ್ರೀ ಸ್ವಾಮೀಜಿಯವರನ್ನು (Abhinava Halashree Swamiji) ಬೆಂಗಳೂರು ಪೊಲೀಸ್ ನ ಅಪರಾಧ ನಿಗ್ರಹ ದಳದ ಪೊಲೀಸರು ಒಡಿಶಾದಲ್ಲಿ ವಶಕ್ಕೆ ಪಡೆದಿದ್ದಾರೆ.
ಸ್ವಾಮೀಜಿ ಈ ಪ್ರಕರಣ ಹೊರಬಂದಾಗಿನಿಂದ ತಲೆಮರೆಸಿಕೊಂಡಿದ್ದರು. ಅವರನ್ನು ಹುಡುಕುತ್ತಿದ್ದ ಪೊಲೀಸರು ಸೆ. 19ರಂದು ಒಡಿಶಾದ ಕಟಕ್ ನಲ್ಲಿರುವ ಖಾಸಗಿ ಹೋಟೆಲೊಂದಲ್ಲಿ ಬಂಧಿಸಿದ್ದಾರೆ. ಅವರನ್ನು ಸೆ. 19ರ ರಾತ್ರಿ ಹೊತ್ತಿಗೆ ಬೆಂಗಳೂರಿಗೆ ಕರೆತರುವ ಸಾಧ್ಯತೆಗಳಿವೆ. ಅವರು ಆಶ್ರಮದಲ್ಲಿರುವ ಕಾರನ್ನು ಖುದ್ದಾಗಿ ಡ್ರೈವ್ (Drive) ಮಾಡಿಕೊಂಡು ಬೇರೆಲ್ಲಿಗೋ ಹೋಗಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದವು. ಹಾಗಾಗಿ, ಅತ್ತ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಸ್ವಾಮೀಜಿಯವರ ಖಾಸಗಿ ಡ್ರೈವರ್ ಲಿಂಗರಾಜುನನ್ನು (Lingaraju) ಮೂರು ದಿನಗಳ ಹಿಂದೆ ಬಂಧಿಸಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆ ನಡೆಸಿದಾಗ ಸ್ವಾಮೀಜಿಯವರು ತಾವೇ ಖುದ್ದಾಗಿ ಕಾರು ಚಲಾಯಿಸಿಕೊಂಡು ಮೈಸೂರಿಗೆ ಹೋಗಿದ್ದಾಗಿಯೂ ಅಲ್ಲಿ ಕಾರಿನ ನಂಬರ್ ಪ್ಲೇಟ್ (Number Plate) ಗಳನ್ನು ಕಳಚಿಟ್ಟು ಅಲ್ಲಿಂದ ಹೈದರಾಬಾದ್ ಗೆ ತೆರಳಿದ್ದಾಗಿಯೂ ತಿಳಿದುಬಂದಿತ್ತು. ಹಾಗಾಗಿ ಸಿಸಿಬಿ ಪೊಲೀಸರ ತಂಡವೊಂದು ಹೈದರಾಬಾದ್ ತೆರಳಿತ್ತು.
ಸೆ. 19ರ ಬೆಳಗ್ಗೆ ಬಂದ ಸುದ್ದಿಯ ಪ್ರಕಾರ ಸ್ವಾಮೀಜಿಯವರನ್ನು ಒಡಿಶಾದಲ್ಲಿ ಬಂಧಿಸಲಾಗಿದ್ದು, ಒಡಿಶಾದ (Odisha) ಕಟಕ್ ನಲ್ಲಿನ ಖಾಸಗಿ ಹೋಟೆಲ್ ಒಂದರಲ್ಲಿ ನೆಲೆಸಿದ್ದ ಸ್ವಾಮೀಜಿಯನ್ನು ಪತ್ತೆ ಹಚ್ಚಿದ್ದ ಪೊಲೀಸರು ಅವರ ಹೋಟೆಲ್ ಗೆ ಹೋಗಿದ್ದರು. ಆದರೆ ಅಷ್ಟರಲ್ಲಾಗಲೇ ಅವರು ಅಲ್ಲಿಂದ ಕಾಲ್ಕಿತ್ತಿದ್ದರು ಎಂದು ಹೇಳಲಾಗಿದೆ.
ಅವರು ಕಟಕ್ ನಿಂದ ಬೌದ್ಧ್ ಗಯಾಕ್ಕೆ ತೆರಳುವ ರೈಲಿನಲ್ಲಿದ್ದರು. ಪ್ರತಿ ಗಂಟೆಗೊಮ್ಮೆ ಸ್ಥಳ ಬದಲಾಯಿಸುತ್ತಿದ್ದ ಸ್ವಾಮೀಜಿ ರೈಲಿನಲ್ಲಿ ಹೋಗಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕಾವಿಯನ್ನು ತ್ಯಜಿಸಿ, ಟೀ ಶರ್ಟ್, ಪ್ಯಾಂಟ್ ಹಾಕಿಕೊಂಡು ವೇಷ ಮರೆಸಿಕೊಂಡಿದ್ದರು. ಅವರನ್ನು ಸೂಕ್ತವಾಗಿ ಗುರುತು ಹಿಡಿಯುವಲ್ಲಿ ಸಿಸಿಬಿ ಯಶಸ್ವಿಯಾಗಿದೆ. ಅವರನ್ನು ಕಟಕ್ ನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಭವ್ಯಶ್ರೀ ಆರ್.ಜೆ