ಹಿಜಾಬ್‍ಗೆ ಅವಕಾಶ ಕೊಡಿ ; 61 ಬುದ್ದಿಜೀವಿಗಳಿಂದ ಸಿಎಂಗೆ ಮನವಿ!

hijab

ರಾಜ್ಯದಲ್ಲಿ(Karnataka State) ಧರ್ಮ(Religion) ಸಂಘರ್ಷ(Conflict) ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಎಲ್ಲೆಡೆ ದ್ವೇಷ ಭಾವನೆ ಹೆಚ್ಚುತ್ತಿದೆ. ಹೀಗಾಗಿ ರಾಜ್ಯದ ಮುಖ್ಯಮಂತ್ರಿಗಳು(ChiefMinister) ಈ ವಿವಾದಗಳನ್ನು ಬಗೆಹರಿಸಬೇಕೆಂದು ರಾಜ್ಯದ 61 ಬುದ್ದಿಜೀವಿಗಳು ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ(Basavaraj Bommai) ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಈ ಪತ್ರದಲ್ಲಿ ಸಮವಸ್ತ್ರದೊಂದಿಗೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು, ಭಗವದ್ಗೀತೆಗಿಂತ ಶಾಲೆಗಳಲ್ಲಿ ಸಂವಿಧಾನವನ್ನು ಬೋಧನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಮುಸ್ಲಿಂ ವ್ಯಾಪಾರಿಗಳಿಗೆ ಹಿಂದೂಗಳ ಧಾರ್ಮಿಕ ಜಾತ್ರೆ ಮತ್ತು ಉತ್ಸವಗಳಲ್ಲಿ ನಿಷೇಧ ಹೇರುವುದು ಸರಿಯಲ್ಲ. ನಮ್ಮ ನಾಡು ಸಾಮರಸ್ಯದ ನಾಡು. ಇಲ್ಲಿ ಎಲ್ಲ ಜಾತಿ-ಧರ್ಮಗಳಿಗೂ ಸಮಾನವಾದ ಅವಕಾಶ ನೀಡಬೇಕು.

ಮುಸ್ಲಿಂಮರು ಇಲ್ಲದೇ ಹಿಂದೂಗಳ ಜಾತ್ರೆ-ಉತ್ಸವಗಳು ಸಂಪನ್ನವಾಗಲು ಸಾಧ್ಯವಿಲ್ಲ. ಬಹಿಷ್ಕಾರ ಹಾಕುವುದು ಅಸಂವಿಧಾನಿಕ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ರೆಹಮತ್ ತರೀಕೆರೆ, ಬಂಜಗೆರೆ ಜಯಪ್ರಕಾಶ್, ಎಸ್.ಜಿ.ಸಿದ್ದರಾಮಯ್ಯ ಮತ್ತು ಕೆ. ಮರುಳ ಸಿದ್ದಪ್ಪ ಸೇರಿದಂತೆ 61 ಬುದ್ದಿಜೀವಿಗಳು ಬರೆದಿರುವ ಈ ಪತ್ರದಲ್ಲಿ ಮೂರು ಮುಖ್ಯ ಅಂಶಗಳನ್ನು ಉಲ್ಲೇಖಿಸಿದ್ದಾರೆ.

  1. ಸಮವಸ್ತ್ರದ ಭಾಗವಾಗಿಯೇ ಹಿಜಾಬ್ ಧರಿಸಲು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಅವಕಾಶ ನೀಡುವುದು. ಈಗ ರೂಪಿಸಿರುವ ವಸ್ತ್ರಸಂಹಿಂತೆ ಅವೈಜ್ಞಾನಿಕವಾಗಿದ್ದು, ಅದನ್ನು ಹಿಂದಕ್ಕೆ ತೆಗೆದುಕೊಳ್ಳುವುದು.
  2. ಶಾಲಾ ಪಠ್ಯದಲ್ಲಿ ಭಗವದ್ಗೀತೆಗಿಂತ ಸಂವಿಧಾನವನ್ನು ಅಳವಡಿಸುವುದು.
  3. ರಾಜ್ಯದ ಹಿಂದೂ ಧಾರ್ಮಿಕ ಜಾತ್ರೆ-ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ನಿರ್ಬಂಧ ವಿಧಿಸುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳುವುದು. ಮುಸ್ಲಿಂ ವ್ಯಾಪಾರಿಗಳಿಗೆ ಎಲ್ಲ ಕಡೆ ವ್ಯಾಪಾರ ಮಾಡಲು ಅವಕಾಶ ನೀಡುವುದು.

ಮುಖ್ಯವಾಗಿ ಈ ಮೂರು ಅಂಶಗಳನ್ನು ಇಟ್ಟುಕೊಂಡು 61 ಬುದ್ದಿಜೀವಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದು, ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ವಿಚಾರಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ರಾಜಕೀಯ ಪಕ್ಷಗಳು ಸಂವಿಧಾನದ ಆಶಯವನ್ನು ಮರೆತು ಅಸಂವಿಧಾನಿಕವಾಗಿ ನಡೆದುಕೊಳ್ಳುತ್ತಿವೆ. ನಮ್ಮದು ನಾಗರಿಕ ಸಮಾಜ, ಎಲ್ಲರೂ ಸಹಬಾಳ್ವೆಯಿಂದ ಬದುಕಬೇಕು.

ನಮ್ಮ ಸಂವಿಧಾನ ಎಲ್ಲರಿಗೂ ಸಮಾನವಾದ ಅವಕಾಶ ನೀಡಿದೆ. ಅದನ್ನು ಕಿತ್ತುಕೊಳ್ಳುವುದು ಸಂವಿಧಾನ ವಿರೋಧಿ ಧೋರಣೆಯಾಗುತ್ತದೆ. ರಾಜ್ಯದಲ್ಲಿ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಸಂವಿಧಾನ ವಿರೋಧಿ ಕೃತ್ಯಗಳಿಗೆ ಸರ್ಕಾರ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಪತ್ರ ಮುಖೇನ ಒತ್ತಾಯಿಸಿದ್ದಾರೆ.

Exit mobile version