ಅತಿಯಾಗಿ ಬೆವರುವ ತೊಂದರೆಯನ್ನು ಉಂಟುಮಾಡುವ ‘ಹೈಪರ್ ಹೈಡ್ರೋಸಿಸ್’ ಬಗ್ಗೆ ಇರಲಿ ಎಚ್ಚರ!

ದೇಹವನ್ನು ತಂಪಾಗಿಡಲು ಬೆವರು(Sweat) ಅನಿವಾರ್ಯ, ಅದು ಸಹಜ ಕ್ರಿಯೆ ಕೂಡ. ನಿಯಂತ್ರಿಸಲಾರದ ಬೆವರು(How To Control Excess Sweat) ಮುಜುಗರ ಉಂಟು ಮಾಡಬಹುದು.

ವಾಸನೆ, ತುರಿಕೆ ರೂಪದಲ್ಲಿ ಕಿರಿಕಿರಿ ಅಂದೆನಿಸಬಹುದು. ಆದರೆ ಅದನ್ನು ಹಾಗೆ ನಿರ್ಲಕ್ಷಿಸಬಾರದು.

ಕಾರಣ ಅದು ಇನ್ಯಾವುದೋ ಕಾಯಿಲೆಯ ಲಕ್ಷಣವಿರಬಹುದು ಅಥವಾ ಹೈಪರ್ ಹೈಡ್ರೋಸಿಸ್ (How To Control Excess Sweat)ಎನ್ನುವ ವೈದ್ಯಕೀಯ ಸಮಸ್ಯೆಯೂ ಆಗಿರಬಹುದು.

ಸಾಮಾನ್ಯವಾಗಿ ಬಿಸಿ ಹವೆಯಲ್ಲಿ ಆಗಾಗ ಬೆವರುತ್ತೇವೆ. ವ್ಯಾಯಾಮ ಮಾಡಿದಾಗ, ದೈಹಿಕ ಶ್ರಮ ಅಥವಾ ಕೆಲವು ಸಂದರ್ಭಗಳಲ್ಲಿ ಸಿಟ್ಟಾದಾಗ, ಆಂತಕ, ಮುಜುಗರಕ್ಕೊಳಗಾದಾಗ ಬೆವರುವುದು ಸಹಜ.

ಆದರೆ ನಿತ್ಯದ ಚಟುವಟಿಕೆ, ಹೊರಗಡೆಯ ತಾಪಮಾನದ ಹೊರತಾಗಿಯೂ ಹೆಚ್ಚು ಬೆವರುತ್ತೇವೆ ಅಂದರೆ ದೇಹದಿಂದ ಸಹಜವಾಗಿ ಹೊರ ಸೂಸುವ ಬೆವರು ಅದಲ್ಲ.

ವಿಪರೀತ ಬೆವರುವಿಕೆಯನ್ನು ಹೈಪರ್ ಹೈಡ್ರೋಸಿಸ್ ಅಂತಾರೆ. ಬೆವರು ಗ್ರಂಥಿಗಳ ಅತಿಯಾದ ಚಟುವಟಿಕೆಯಿಂದ ಹೈಪರ್ ಹೈಡ್ರೋಸಿಸ್ ಎನ್ನುವ ದೇಹಸ್ಥಿತಿ ಕಂಡು ಬರುತ್ತದೆ.

https://youtu.be/UJ3flOQeLBE ಸಮಾಜಮುಖಿ ಕೆಲಸದಲ್ಲಿ ಖುಷಿ ಕಾಣುತ್ತಿರುವ ಸರ್ವಕನಸು ತಂಡ!

ಸಾಮಾನ್ಯವಾಗಿ, ಇದು ಯಾವುದೇ ವಯಸ್ಸಿನಲ್ಲಾದರೂ ಕಂಡು ಬರಬಹುದು. ಮಹಿಳೆ, ಪುರುಷರು, ಮಕ್ಕಳು, ದೊಡ್ಡವರು ಅಂತೆಲ್ಲ ಭೇದವಿಲ್ಲ.

ಕೆಲವರಲ್ಲಿ ಬಾಲ್ಯದಲ್ಲೇ ಕಾಣಿಸಿಕೊಳ್ಳುವ ಈ ಸಮಸ್ಯೆ ಜೀವನಪೂರ್ತಿ ಕಾಡಬಹುದು. ಇದು ಸಾಮಾನ್ಯವಾಗಿ ಬಾಲ್ಯದಲ್ಲೇ ಶುರುವಾಗುತ್ತದೆ ಅಥವಾ ಹರೆಯದಲ್ಲಿ ಆರಂಭವಾಗಲೂಬಹುದು.

ಇದು ಕಿರಿಕಿರಿ ಉಂಟು ಮಾಡುವುದರ ಜತೆ ಖಿನ್ನತೆ ಹಾಗೂ ಭಾವನಾತ್ಮಕ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ವೈಯಕ್ತಿಕ, ಸಾಮಾಜಿಕ ಹಾಗೂ ಕೆಲಸ ಮಾಡುವ ಸ್ಥಳದೊಂದಿಗೆ ಥಳಕು ಹಾಕಿಕೊಳ್ಳುತ್ತದೆ.

ಒಂದು ರೀತಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆ.


ಪ್ರೈಮರಿ ಫೋಕಲ್ ಹೈಪರ್ ಹೈಡ್ರೋಸಿಸ್ ಆಂದರೆ ದೇಹದ ನಿಗದಿತ ಭಾಗದಲ್ಲಿ ಮಾತ್ರ ಹೆಚ್ಚು ಬೆವರುತ್ತದೆ. ಇದು ಕಂಕುಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಇದು ಯಾವುದೇ ವೈದ್ಯಕೀಯ ಸ್ಥಿತಿ ಅಥವಾ ಔಷಧಗಳ ಅಡ್ಡ ಪರಿಣಾಮದಿಂದಾಗುವಂತಹದ್ದಲ್ಲ. ಹೈಪರ್ ಹೈಡ್ರೋಸಿಸ್ ಸಾಮಾನ್ಯವಾಗಿ ಪಾದ, ಮುಖ, ಅಂಗೈ ಹಾಗೂ ಕಂಕಳಲ್ಲಿ ಅತ್ಯಧಿಕ ಬೆವರನ್ನು ಹೊರ ಸೂಸುತ್ತದೆ.

ಇದು ಮಲಗಿದಾಗ ಅಥವಾ ವಿಶ್ರಾಂತಿ ಪಡೆದಾಗ ಕಮ್ಮಿ ಆಗುತ್ತದೆ. ಇದು ವಂಶಪಾರಂಪರಗತವಾಗಿ ಬರುವ ಸಾಧ್ಯತೆ ಇರುತ್ತದೆ.
ಇನ್ನು, ವಿಶ್ರಾಂತಿ ಪಡೆಯುವಾಗ,

ರಾತ್ರಿ ಮಲಗಿದಾಗ, ಊಟ ಮಾಡುವಾಗ ತೀರ ಬೆವರುತ್ತಿದ್ದರೆ ಅದು ಬೇರೆ ಕಾಯಿಲೆಗಳ ಲಕ್ಷಣವಾಗಿರುವ ಸಾಧ್ಯತೆ ಇದೆ.

ಇದನ್ನೂ ಓದಿ : https://vijayatimes.com/review-of-appu-gandadagudi/

ಏಕೆಂದರೆ ಥೈರಾಯಿಡ್, ಮಧುಮೇಹ, ಹೃದಯ ತೊಂದರೆ ಇದ್ದಾಗ ಇದೇ ರೀತಿಯ ಬೆವರಿನ ಲಕ್ಷಣಗಳು ಕಾಣಿಸುತ್ತವೆ ಅಂತಾರೆ ತಜ್ಞರು.

ಭಾವನಾತ್ಮಕ ಸಂಗತಿಗಳು ಕೂಡ ಅತಿಯಾದ ಬೆವರುವಿಕೆಯನ್ನು ಉಂಟು ಮಾಡುತ್ತವೆ. ಆದ್ದರಿಂದ ಭಾವನೆಗಳನ್ನು ನಿಯಂತ್ರಿಸುವತ್ತ ಗಮನ ಹರಿಸಿ.

ಹೈಪರ್ ಹೈಡ್ರೋಸಿಸ್ ನಿಮ್ಮನ್ನು ಮಾನಸಿಕವಾಗಿ ಮತ್ತಷ್ಟು ಕುಗ್ಗಿಸಬಹುದು. ಹಾಗಂತ ಸಮಸ್ಯೆಯನ್ನು ಒಡಲಲ್ಲೇ ಇಟ್ಟುಕೊಂಡರೆ ಪರಿಹಾರವಾಗುವುದಿಲ್ಲ.

ಅತಿಯಾಗಿ ಬೆವರು ಕಾಣಿಸಿಕೊಂಡಾಕ್ಷಣ ಅದು ಬೇರೆ ಕಾಯಿಲೆ ಇರಬೇಕು ಅಂತೆಲ್ಲ ಭಯ ಪಡುವ ಅಗತ್ಯವಿಲ್ಲ. ಸಾಮಾನ್ಯ ಔಷಧೋಪಚಾರದ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.

ಹಾಗಂತ ನಿರ್ಲಕ್ಷ್ಯ ಕೂಡ ಒಳ್ಳೆಯದಲ್ಲ. ಕೆಲವು ಲಕ್ಷಣಗಳು ಅಂದರೆ ಬೆವರಿನ ಜತೆ ಎದೆ ನೋವು, ಕಿರಿದಾದ ಉಸಿರಾಟ, ಬೆವರು ಹಾಗೂ ತೂಕ ಕಳೆದುಕೊಳ್ಳುವಿಕೆ, ದೀರ್ಘಕಾಲದ, ಮಿತಿಮೀರಿದ ಬೆವರು, ನಿದ್ರಾವಧಿಯಲ್ಲಿ ಹೆಚ್ಚು ಬೆವರುತ್ತಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.


ಇನ್ನು, ಹೈಡ್ರೋಸಿಸ್‌ಗೆ ಹಲವಾರು ಬಗೆಯ ಚಿಕಿತ್ಸಾ ವಿಧಾನಗಳಿವೆ. ಅದರ ತೀವ್ರತೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುವುದು.

ಕಂಕುಳಿಗಷ್ಟೆ ಸೀಮಿತವಾದ ಸಮಸ್ಯೆಯಾದರೆ ಆಂಟಿ ಪರ್ಸ್‌ಪಿರೆಂಟ್ ರೋಲ್ ಬಳಸಿದರೆ ಸಾಕು.

ಇದು ಬೆವರು ಗ್ರಂಥಿಗಳನ್ನು ಮುಚ್ಚಿ ಹೆಚ್ಚುವರಿ ಬೆವರು ಹೊರ ಸೂಸುವಿಕೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ : https://vijayatimes.com/chethan-slams-political-parties/

ಹೈಡ್ರೋಸಿಸ್‌ನ ತೀವ್ರತೆಗೆ ಅನುಗುಣವಾಗಿ ಮಾತ್ರೆ, ಬೋಟಾಕ್ಸ್ ಇಂಜೆಕ್ಷನ್ ಮತ್ತಿತರ ಚಿಕಿತ್ಸೆ ನೀಡಲಾಗುವುದು. ಇನ್ನೊಂದು ವಿಧಾನವೆಂದರೆ ಹೆಚ್ಚು ಬೆವರು ಉತ್ಪಾದನೆ ಉಂಟು ಮಾಡುವ ನರವನ್ನು ಸರ್ಜರಿ ಮೂಲಕ ಶಾಶ್ವತವಾಗಿ ತೆಗೆದು ಹಾಕುವುದು.

ಇದು ಕೂಡ ಸುಲಭ ವಿಧಾನವಾಗಿರುವುದರಿಂದ ಚಿಂತಿಸುವ ಅಗತ್ಯವಿಲ್ಲ.

Exit mobile version