ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

Dubai : ದುಬೈ-ಮುಂಬೈಗೆ (Dubai-Mumbai) ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮದ್ಯಪಾನ ಮಾಡಿರುವುದು ತಿಳಿಯುತ್ತಿದ್ದಂತೆ ಅವರನ್ನು ಪೊಲೀಸರ ಸಹಾಯದಿಂದ ಬಂಧಿಸಲಾಗಿದೆ.
ಇಬ್ಬರು ಪುರುಷ ಪ್ರಯಾಣಿಕರು ಮದ್ಯಪಾನ ಮಾಡಿದ್ದಾರೆ. ಇದಲ್ಲದೇ ತಮ್ಮ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ ಮತ್ತು ವಿಮಾನ ಸಿಬ್ಬಂದಿಯನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಪೊಲೀಸರು ಈ ಇಬ್ಬರು ಪ್ರಯಾಣಿಕರನ್ನು ಬಂಧಿಸಿದ್ದಾರೆ. ಆದ್ರೆ, ಜಾಮೀನಿನ ಆಧಾರದ ಮೇಲೆ ಈ ಇಬ್ಬರನ್ನು ಬಿಡುಗಡೆ ಮಾಡಲಾಗಿದೆ.

ಗಲ್ಫ್‌ನಿಂದ ಹಿಂದಿರುಗಿದ ಇಬ್ಬರು ಪ್ರಯಾಣಿಕರು ಸುಂಕ ರಹಿತ ಅಂಗಡಿಯಿಂದ ತಂದಿದ್ದ ಮದ್ಯವನ್ನು ಸೇವಿಸಿ ಸಲೆಬ್ರೇಷನ್ (Celebration) ನಡೆಸಿದ್ದಾರೆ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಇಬ್ಬರು ಪುರುಷರು ಕುಡಿದ ಅಮಲಿನಲ್ಲಿ ಒಬ್ಬರಿಗೊಬ್ಬರು ವಾದ-ವಿವಾದ ನಡೆಸಿದ್ದಾರೆ. ವಿರೋಧಗಳು ಹೆಚ್ಚಾದಾಗ ಆರೋಪಿಗಳಲ್ಲಿ ಒಬ್ಬರು ಮದ್ಯದ ಬಾಟಲಿಯೊಂದಿಗೆ ಎದುರಾಳಿಗೆ ಹೊಡೆಯಲು ಪ್ರಾರಂಭಿಸಿದ್ದಾನೆ. ಇವರಿಬ್ಬರ ಜಗಳ ತಾರಕಕ್ಕೇರಿದ ಕೂಡಲೇ ಇಂಡಿಗೋ ವಿಮಾನ ಸಿಬ್ಬಂದಿಗಳು ಇಬ್ಬರ ಕೈಯಲ್ಲಿದ್ದ ಬಾಟಲಿಗಳನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವಿಮಾನ ಮುಂಬೈನಲ್ಲಿ ಇಳಿದ ನಂತರ ಇಬ್ಬರು ಪ್ರಯಾಣಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ದತ್ತಾತ್ರೇಯ ಬಾಪರ್ಡೇಕರ್(Dattatreya Bapardekar) ಮತ್ತು ಜಾನ್ ಜಾರ್ಜ್ ಡಿಸೋಜಾ (John George Dsouza) ವಿರುದ್ಧ ಐಪಿಸಿ ಸೆಕ್ಷನ್ 336 (ಇತರರ ಜೀವ ಮತ್ತು ಸುರಕ್ಷತೆಗೆ ಅಪಾಯ) ಮತ್ತು ಏರ್‌ಕ್ರಾಫ್ಟ್ ನಿಯಮಗಳ 21,22 ಮತ್ತು 25 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರೋಟೋಕಾಲ್(Protocol) ಪ್ರಕಾರ, ಅಶಿಸ್ತಿನ ವರ್ತನೆಗಾಗಿ ಅವರನ್ನು ಸಿಐಎಸ್ಎಫ್(CISF) ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ. ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಇಂಡಿಗೋ ಏರ್ಲೈನ್ಸ್ ತಿಳಿಸಿದೆ. ಈ ವರ್ಷದಲ್ಲಿ ಇದು ಏಳನೇ ಘಟನೆಯಾಗಿದ್ದು, ವಿಮಾನ ಪ್ರಯಾಣದಲ್ಲಿ ದಿನೇ ದಿನೇ ಕುಡಿದು ಪ್ರಯಾಣಿಸುವವರ ಸಂಖ್ಯೆ ಅಧಿಕವಾಗುತ್ತಿದೆ. ವಿಮಾನದಲ್ಲಿ ಕುಡಿದು ಸಹ ಪ್ರಯಾಣಿಕರಿಗೆ ಕಿರಿಕಿರಿ ನೀಡುವವರನ್ನು ಪೊಲೀಸರು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version