ಮಹಿಳಾ ದಿನಾಚರಣೆಯನ್ನು ಯಾಕೆ ಆಚರಿಸಲಾಗುತ್ತದೆ?

womens

ಪ್ರತಿವರ್ಷ ಮಾರ್ಚ್ 08 ರಂದು ಅಂದರೆ, ಇಂದು ಅಂತರರಾಷ್ಟ್ರೀಯ ಮಹಿಳಾ ದಿನವೆಂದು ಆಚರಿಸಲಾಗುತ್ತದೆ.

ಯಾಕೆ ಈ ದಿನವನ್ನ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತೆ ಗೊತ್ತಾ? ಈಗಾಗಲೇ ಮಹಿಳೆಯರು ಸರಿ ಸುಮಾರು ಎಲ್ಲಾ ಕ್ಷೇತ್ರಗಳಲ್ಲು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ತಮ್ಮ ತಮ್ಮ ಕ್ಷೇತ್ರದಲ್ಲಿ ಮಹತ್ತರದ ಸಾಧನೆಗಳನ್ನ ಮಾಡುತ್ತಿದ್ದಾರೆ.

ಈಗಾಗಲೇ ಮಾಡಿದ್ದಾರೆ ಕೂಡ. ಹಾಗಾಗಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಇವರು ಮಾಡಿದ ಸಾಧನೆಗಳನ್ನು ಸ್ಮರಿಸಲು, ಸಾಧನೆಯ ಹಾದಿಯಲ್ಲಿರುವವರನ್ನು ಗುರುತಿಸಿ ಗೌರವ ಸಲ್ಲಿಸಲು ಮತ್ತು ಮಹಿಳಾ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು, ಈ ದಿನವನ್ನ ಮಹಿಳಾ ದಿನವೆಂದು ಆಚರಿಸಲಾಗುತ್ತಿದೆ. ಇಷ್ಟೇ ಅಲ್ಲ ಪ್ರಪಂಚದ ಎಲ್ಲಾ ಮಹಿಳೆಯರಿಗೂ ತಮ್ಮ ತ್ಯಾಗ ಮತ್ತು ಅಭೂತಪೂರ್ವ ಪ್ರೀತಿ ಕೊಡುವ ವ್ಯಕ್ತಿತ್ವಕ್ಕೆ ಗೌರವ ಹಾಗು ಕೃತಜ್ಞತೆ ತೋರುವ ದಿನ ಇದಾಗಿದೆ.

ಮಹಿಳಾ ದಿನಾಚರಣೆಯ ಕಲ್ಪನೆ ಹುಟ್ಟಿದ್ದು ಯಾವಾಗ? 1910 ರಲ್ಲಿ ಕ್ಲಾರಾ ಜೆಟ್ಕಿನ್ ಎಂಬ ಜರ್ಮನ್ ಮೂಲದ ಮಹಿಳೆ, ಈಕೆ ಮಾರ್ಕ್ಸ್ ವಾದಿಕೂಡ ಹೌದು, ಈಕೆ ದುಡಿಯುವ ಮಹಿಳೆಯರ ಪರವಾಗಿ ಸಮಾನತೆ ಸಾರುವ ಮೂಲಕ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಎಂಬ ಕಲ್ಪನೆಯನ್ನು ಹುಟ್ಟು ಹಾಕುತ್ತಾರೆ. ಭಾರತದಲ್ಲಿ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವ ಒಂದೊಳ್ಳೆ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ 08 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ರಾಷ್ಟ್ರವನ್ನು ಹೆಮ್ಮೆ ಪಡಿಸಿದ ಮಹಿಳಾ ಸಾಧಕಿಯರ ಬಗ್ಗೆ ತಿಳಿಯೋಣ ಬನ್ನಿ.

ರಾಷ್ಟ್ರವನ್ನು ಹೆಮ್ಮೆಪಡಿಸಿದ ಮಹಿಳಾ ಸಾಧಕೀಯರು :

ಮೇರಿ ಕೋಮ್ ಮೊದಲಿಗೆ ವಿಶ್ವದಲ್ಲಿ ಸರ್ಮಥ ಭಾರತೀಯ ಮಹಿಳಾ ಬಾಕ್ಸರ್ ಆಗಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು, ಈಗ ಒಬ್ಬ ಸರ್ಮಥ ರಾಜಕಾರಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆರು ಬಾರಿ ವಿಶ್ವ ಅಮೆಚೂರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಗೆದ್ದ ಏಕೈಕ ಮಹಿಳೆ ಮತ್ತು ಎಂಟು ವಿಶ್ವ ಚಾಂಪಿಯನ್‌ಶಿಪ್ ಪದಕಗಳನ್ನು ಗೆದ್ದ ಏಕೈಕ ಬಾಕ್ಸರ್ ಅಂದ್ರೆ ಅದೂ ಮೇರಿ ಕೋಮ್ ಮಾತ್ರ. ಮೇರಿ ಕೋಮ್ ಅವರ ಜೀವನಾಧಾರಿತ ಚಲನಚಿತ್ರವನ್ನು ಸಹ ಹೊಂದಿದ್ದರು, ಇದರಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದಾರೆ.

ಕಲ್ಪನ ಚಾವ್ಲಾ ಬಗ್ಗೆ ನಾವೆಲ್ಲರೂ ಶಾಲೆಯಲ್ಲಿ ಓದಿದ್ದೇವೆ ಅಥವಾ ಕೇಳಿದ್ದೇವೆ. ಕಲ್ಪನಾ ಚಾವ್ಲಾ ಅವರು ಮೊದಲ ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಮತ್ತು ಇಂಜಿನಿಯರ್ ಆಗಿದ್ದರು. ಬಾಹ್ಯಾಕಾಶಕ್ಕೆ ಹಾರಿದ ಭಾರತೀಯ ಮೊಟ್ಟ ಮೊದಲ ಮಹಿಳೆಯಾಗಿದ್ದಾರೆ. ಇವರ ಸಾಧನೆ ರಾಷ್ಟ್ರಕ್ಕೆ ಹೆಮ್ಮೆ ತಂದುಕೊಟ್ಟಿತು. ಚಾವ್ಲಾ ಅವರು ತಮ್ಮ ಕೊನೆಯ ಪ್ರಯಾಣದ ವಿಮಾನದಲ್ಲಿ ಮರಣಹೊಂದಿದರು.

ಇಂದಿರಾ ಗಾಂಧಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಕೇಂದ್ರ ವ್ಯಕ್ತಿ ಅಂತಾನೆ ಹೇಳಬಹುದು. ಭಾರತದ 3ನೇ ಪ್ರಧಾನ ಮಂತ್ರಿ ಮತ್ತು ಭಾರತದ ಮೊದಲ ಮತ್ತು ಇಲ್ಲಿಯವರೆಗೂ ಏಕೈಕ ಮಹಿಳಾ ಪ್ರಧಾನ ಮಂತ್ರಿ ಅಂದರೆ ಅದೂ ಇಂದಿರಾ ಗಾಂಧಿ ಮಾತ್ರ.
ಜನವರಿ 1966 ರಿಂದ ಮಾರ್ಚ್ 1977 ರವರೆಗೆ ಮತ್ತು ಮತ್ತೆ ಜನವರಿ 1980 ರಿಂದ ಅಕ್ಟೋಬರ್ 1984 ರವರೆಗೆ ತಮ್ಮ ತಂದೆ ಜವಾಹರ್ ಲಾಲ್ ನೆಹರು ನಂತರ ಇಂದಿರಾ ಗಾಂಧಿಯವರು ದೀರ್ಘಕಾಲ ಸೇವೆ ಸಲ್ಲಿಸಿದ ಏಕೈಕ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಮಲಾಬಾಯಿ ಗೋಖಲೆ ಭಾರತೀಯ ಚಿತ್ರರಂಗದ ಮೊದಲ ಮಹಿಳಾ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಹೆಣ್ಣು ಮಕ್ಕಳು, ಹೆಂಗಸರು ಮನೆಯಿಂದ ಆಚೆ ಬರಲು ಅವಕಾಶವಿರದ ಕಾಲದಲ್ಲಿ ದುರ್ಗಾಬಾಯಿ ಕಾಮತ್ ಅವರ ಪುತ್ರಿ ಕಮಲಾಬಾಯಿ ಗೋಖಲೆಯವರು ಭಾರತೀಯ ಚಿತ್ರರಂಗದ ಮೊದಲ ಮಹಿಳಾ ನಟಿಯಾಗಿ ಗುರುತಿಸಿಕೊಳ್ಳುವ ಮೂಲಕ ತಮ್ಮ ಸಾಧನೆಯನ್ನು ಮೆರೆದಿದ್ದಾರೆ.

ಕ್ರಿಕೆಟ್ ಎಂಬ ಆಟ ಕೇವಲ ಪುರುಷರಿಗೆ ಮಾತ್ರ ಸೀಮಿತ, ಇದು ಪುರುಷರ ಆಟ ಎಂದೇ ಪ್ರಸಿದ್ದಿ ಪಡೆದಿದ್ದ ಸಮಯದಲ್ಲಿ ಈ ಒಂದು ಕಲ್ಪನೆಯನ್ನು ಮುರಿದು ನಾವು ಕೂಡ ಏನು ಕಮ್ಮಿ ಇಲ್ಲ. ಕ್ರಿಕೆಟ್ ನಲ್ಲೂ ಕೂಡ ನಾವು ನಿಮಗೆ ಸರಿಸಮಾನರಾಗಿದ್ದೀವಿ ಎಂಬುದನ್ನು ಸಾಬೀತು ಮಾಡಿದ ನಮ್ಮ ಹೆಣ್ಣು ಮಕ್ಕಳ ಸಾಧಾನೆ ಶ್ಲಾಘನೀಯ. ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಮಹಿಳೆಯರನ್ನೂ ನೋಡಬಹುದು ಅದರಲ್ಲಿ ಮಿಥಾಲಿ ರಾಜ್ ಎಂಬುವರು ಭಾರತ ಮಹಿಳಾ ಕ್ರಿಕೆಟ್ ತಂಡದ ಟೆಸ್ಟ್ ಮತ್ತು ODI ನಾಯಕಿ.

ಇವರು ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಮತ್ತು 7,000 ರನ್‌ಗಳ ಗಡಿ ದಾಟಿದ ಏಕೈಕ ಮಹಿಳಾ ಕ್ರಿಕೆಟಿಗರಾಗಿದ್ದಾರೆ ಮತ್ತು ODI ಗಳಲ್ಲಿ ಅತಿ ಹೆಚ್ಚು ಅರ್ಧ ಶತಕಗಳ ದಾಖಲೆಯನ್ನು ಹೊಂದಿದ್ದ ಮಹಿಳಾ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ.

ಇದಿಷ್ಟೇ ಅಲ್ಲಾ, ಹೇಳುತ್ತಾ ಹೋದರೆ ಇನ್ನು ಅದೆಷ್ಟೋ ಸಾಧಕೀಯರು
ನಮ್ಮ ಕಣ್ಣು ಮುಂದೆ ಬಂದು ನಿಲ್ಲುತ್ತಾರೆ. ಎಲ್ಲಾ ಸಾಧಕಿಯರಿಗೆ ಮಹಿಳಾ ದಿನದ ಶುಭಾಶಯಗಳು.
Exit mobile version