ಹೆಂಡತಿಯ ಹೆಣ ಹೊತ್ತು 130 ಕಿಮೀ ನಡೆದ ; ಇದು ಮನುಕುಲ ತಲೆ ತಗ್ಗಿಸುವ ಘಟನೆ

Visakhapatnam : ಆಂಧ್ರಪ್ರದೇಶದ(Andhra Pradesh) ವಿಶಾಖ ಪಟ್ಟಣದಲ್ಲಿ  ಇಡೀ ಮನುಕುಲವೇ ತಲೆತಗ್ಗಿಸುವ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಮತ್ತು ಪೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಎಲ್ಲೆಡೆ ವೈರಲ್‌ಆಗುತ್ತಿವೆ.

ಒರಿಸ್ಸಾ(Orissa) ಮೂಲದ  ಬಡ ಮಹಿಳೆಯೊಬ್ಬಳು  ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಅವಳು ತನ್ನ ಗಂಡನೊಂದಿಗೆ ವಿಶಾಖ ಪಟ್ಟಣದ ಖಾಸಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಳು.  ಹಲವು ದಿನಗಳ ಚಿಕಿತ್ಸೆಯ ನಂತರ ಆಸ್ಪತ್ರೆಯ ವೈದ್ಯರು  ಅವಳು ಬದುಕುವ ಸಾಧ್ಯತೆ ಕಮ್ಮಿ ಇದೆ ಎಂದು ಗಂಡನಿಗೆ ಹೇಳುತ್ತಾರೆ.  ಆಗ ಗಂಡ  ತನ್ನ ಹೆಂಡತಿಯನ್ನು ಕರೆದುಕೊಂಡು ಒಂದು ಆಟೋ ರಿಕ್ಷಾದಲ್ಲಿ ಊರಿನ ಕಡೆ ಪ್ರಯಾಣ ಆರಂಭಿಸುತ್ತಾನೆ. ಆದರೆ  ಆತನ ದುರ್ದೈವ ಮಾರ್ಗದ ಮಧ್ಯದಲ್ಲಿಯೇ ಅವನ ಹೆಂಡತಿ ತೀರಿಕೊಳ್ಳುತ್ತಾಳೆ.

ಆಗ  ಆಟೋ ಚಾಲಕ ನಾನು ಇನ್ನು ಅಷ್ಟೂ ದೂರ ಶವವನ್ನು ಸಾಗಿಸಲಾರೆ ಎಂದು ಹೇಳಿ ಅವನ  ಬಳಿ ಇದ್ದ 2000 ರೂಪಾಯಿಗಳನ್ನು ತೆಗೆದುಕೊಂಡು ಮಾರ್ಗ ಮಧ್ಯದಲ್ಲೇ  ಆಟೋದಿಂದ ಇಳಿಸಿ  ಹೊರಟು ಹೋಗುತ್ತಾನೆ.  ಹೆಂಡತಿಯ ಚಿಕಿತ್ಸೆಗಾಗಿ ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದರಿಂದ ಆತನ ಬಳಿ ಹಣವಿರಲಿಲ್ಲ.  ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕೇಳಿದರು ಯಾರೂ ಸಹಾಯ ಮಾಡಲಿಲ್ಲ. ಇನ್ನು ಬೇರೆ ದಾರಿಯಿಲ್ಲದೆ 130 ಕಿಲೋಮೀಟರ್ ದೂರದ ತನ್ನ ಊರಿಗೆ  ನಡೆದುಕೊಂಡೇ ಹೆಂಡತಿಯ ಶವ ತೆಗೆದುಕೊಂಡು ಹೋಗಲು ಆತ ಪ್ರಾರಂಭಿಸಿದ.

ವಿಶಾಖ ಪಟ್ಟಣನಿಂದ  ಹಲವಾರು ಕಿಲೋಮೀಟರ್‌ಕ್ರಮಿಸಿದ ನಂತರ   ದಾರಿಯಲ್ಲಿ ಸಿಕ್ಕ ಆಂಧ್ರಪ್ರದೇಶದ ಪೊಲೀಸ್‌ ಅಧಿಕಾರಿಗಳಾದ  ತಿರುಪತಿ ರಾವ್(Thirupathi Rao) ಹಾಗೂ ಕಿರಣ್ ಕುಮಾರ್(Kiran Kumar)  ಅವರು, ಅವನ ಸ್ಥಿತಿಯನ್ನು ಕಂಡು  ಹೆಂಡತಿಯ ಅಂತ್ಯಸಂಸ್ಕಾರಕ್ಕಾಗಿ 10000 ಮತ್ತು ಶವ ಸಾಗಿಸಲು ಆಂಬುಲೆನ್ಸ್ ವ್ಯವಸ್ಥೆ ಮಾಡಿ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ.  ಈ ಮನಕಲಕುವ ಘಟನೆ  ಸಾಮಾಜಿಕ ಮಾದ್ಯಮದಲ್ಲಿ ಎಲ್ಲೆಡೆ ವೈರಲ್‌ಆಗುತ್ತಿದ್ದು, ಗಂಡನ ಪ್ರೀತಿಯನ್ನು ಕೆಲವರು ಶ್ಲಾಘಿಸಿದರೆ, ಇನ್ನೂ ಕೆಲವರು ಪೊಲೀಸ್‌ಅಧಿಕಾರಿಗಳ ಮಾನವೀಯ ಗುಣವನ್ನು ಕೊಂಡಾಡಿದ್ದಾರೆ.

Exit mobile version