ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಶಾಸಕರ ದರ್ಪ ಖಂಡನೀಯ!

ಮಂಡ್ಯದ(Mandya) ಐಟಿಐ ಕಾಲೇಜಿನ(ITI College) ಪ್ರಾಂಶುಪಾಲರಿಗೆ(Principal) ಜೆಡಿಎಸ್ ಶಾಸಕ(JDS MLA) ಎಂ ಶ್ರೀನಿವಾಸ್(M Srinivas) ಅವರು ಕಪಾಳಮೋಕ್ಷ ಮಾಡಿರುವ ಘಟನೆ ಖಂಡನೀಯ.

ಶಾಸಕ ಶ್ರೀನಿವಾಸ್ ಅವರು ಇತರ ಸಿಬ್ಬಂದಿ ಮತ್ತು ಚುನಾಯಿತ ಪ್ರತಿನಿಧಿಗಳ ಮುಂದೆ ಪ್ರಾಂಶುಪಾಲ ನಾಗಾನಂದ ಅವರಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದು, ಅಶ್ಲೀಲ ಪದಗಳಿಂದ ನಿಂದಿಸಿರುವುದು ಅಧಿಕಾರದ ದರ್ಪದ ಸಂಕೇತವಾಗಿದೆ. ಶಾಸಕರ ಈ ದರ್ಪದ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಒರ್ವ ಪ್ರಾಂಶುಪಾಲರೊಡನೆ ಹೇಗೆ ವರ್ತಿಸಬೇಕೆಂಬ ಸಾಮಾನ್ಯ ಜ್ಞಾನವಿಲ್ಲದ ಇಂತ ತಿಳಿಗೇಡಿ, ಅವಿವೇಕಿ ಶಾಸಕರಿಗೆ ಸೂಕ್ತ ಮಾರ್ಗದರ್ಶನದ ಅಗತ್ಯವಿದೆ. ಜನಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಅಧಿಕಾರಿ ವರ್ಗದೊಂದಿಗೆ ಯಾವ ರೀತಿ ವರ್ತಿಸಬೇಕೆಂದು ತಿಳಿದುಕೊಳ್ಳಬೇಕು.

ಅಧಿಕಾರವನ್ನು ಹೊಂದುವುದಕ್ಕಿಂತ, ಅದನ್ನು ಹೇಗೆ ಚಲಾಯಿಸಬೇಕೆಂಬ ಅರಿವು ಇರಬೇಕು. ಅಧಿಕಾರ ಎಂಬುದು ಅನೇಕ ಆಯಾಮಗಳನ್ನು ಹೊಂದಿರುತ್ತದೆ. ಹೀಗಾಗಿ ಅಧಿಕಾರವನ್ನು ಅತ್ಯಂತ ಜಾಗರೂಕತೆಯಿಂದ ಬಳಸಬೇಕು. ಶಾಸಕ ಶ್ರೀನಿವಾಸ್ ಅವರಿಗೆ ಜನರು ನೀಡಿರುವ ಅಧಿಕಾರ ಜನಸಾಮಾನ್ಯರ ಕಷ್ಟಗಳಿಗೆ ಧ್ವನಿಯಾಗುವುದಕ್ಕೆ ಮಾತ್ರ ಸೀಮಿತವಾಗಿದೆ. ಮತ್ತೊಬ್ಬರ ಮೇಲೆ ದೈಹಿಕ ಹಲ್ಲೆ ನಡೆಸುವ, ಅವಮಾನ ಮಾಡುವ, ಅವಾಚ್ಯ ಶಬ್ದಗಳಿಂದ ನಿಂದಿಸುವ ಅಧಿಕಾರ ಶಾಸಕರಿಗಿಲ್ಲ.

ಪ್ರಾಂಶುಪಾಲರು ತಪ್ಪು ಮಾಡಿದ್ದರೆ ಅವರ ಮೇಲೆ ಕಾನೂನು(Law) ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು. ಆದರೆ ಅವರ ಘನತೆಗೆ ಧಕ್ಕೆ ಆಗುವ ರೀತಿಯಲ್ಲಿ ಕಪಾಳಮೋಕ್ಷ ಮಾಡುವುದು ಖಂಡನೀಯ. ಸಮಾಜಕ್ಕೆ ಮಾದರಿಯಾಗಬೇಕಿರುವ ಇಂತ ಜನಪ್ರತಿನಿಧಿಗಳೇ ಈ ರೀತಿಯಾಗಿ ಅವಿವೇಕಿತನದಿಂದ ವರ್ತಿಸಿದರೆ ಸಾಮಾಜಿಕ ಮೌಲ್ಯಗಳು ಕುಸಿಯುತ್ತವೆ. ವ್ಯಕ್ತಿ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಶಾಸಕರ ಈ ನಡೆಯ ವಿರುದ್ದ ಕಠಿಣ ಕ್ರಮಕ್ಕೆ ಮುಂದಾಗಬೇಕು.

Exit mobile version