ಮೇಲುಕೋಟೆಯಲ್ಲಿ ‘ಸಲಾಂ ಆರತಿ’ಗೆ ಬ್ರೇಕ್, ‘ಸಂಧ್ಯಾರತಿ’ಗೆ ಚಿಂತನೆ!

melkote

ಟಿಪ್ಪು ಸುಲ್ತಾನ್(Tippu Sulthan) ಗೌರವಾರ್ಥ ಇತಿಹಾಸ(History) ಪ್ರಸಿದ್ದ ಮೇಲುಕೋಟೆಯ(Melkote) ಚೆಲುವನಾರಾಯಣಸ್ವಾಮಿ(Cheluvanaryanswamy) ದೇವಸ್ಥಾನದಲ್ಲಿ ಪ್ರತಿದಿನ ನಡೆಸುತ್ತಿದ್ದ ‘ದೀವಟಿಗೆ ಸಲಾಂ ಆರತಿ’ಗೆ ಬ್ರೇಕ್ ಹಾಕಿ, ‘ಸಂಧ್ಯಾರತಿ’ಗೆ ಚಾಲನೆ ನೀಡಲು ಮುಜರಾಯಿ ಇಲಾಖೆ(Muzrayi Department) ಚಿಂತನೆ ನಡೆಸಿದೆ ಎನ್ನಲಾಗಿದೆ.

ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ(Mandya DC) ರಾಜ್ಯ ಮುಜರಾಯಿ ಆಯುಕ್ತರಿಗೆ ಪತ್ರ ಬರೆದಿದ್ದು, ‘ದೀವಟಿಗೆ ಸಲಾಂ ಆರತಿ’ ಬದಲಾಗಿ ‘ಸಂಧ್ಯಾರತಿ’ಗೆ ಚಾಲನೆ ನೀಡುವಂತೆ ಶಿಫಾರಸು ಮಾಡಿದ್ದಾರೆ. ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ಮೇಲುಕೋಟೆಯ ಚೇಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇನ್ನು ಮುಂದೆ ಸಂಧ್ಯಾರತಿಗೆ ಚಾಲನೆ ನೀಡಲು ಆದೇಶ ಹೊರಡಿಸಲು ಸಿದ್ದತೆ ನಡೆದಿದೆ.

ಇನ್ನು ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ‘ದೀವಟಿಗೆ ಸಲಾಂ ಆರತಿ’ ಹೆಸರನ್ನು ಬದಲಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ, ಅರ್ಚಕರು ಮತ್ತು ಪರಿಚಾಲಕರು ಮಂಡ್ಯ ಜಿಲ್ಲಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಹಿಂದೂ ವಿರೋಧಿಯಾಗಿದ್ದ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ದೇವಸ್ಥಾನದಲ್ಲಿ ಆರತಿ ನಡೆಸುವ ಕ್ರಮದ ವಿರುದ್ದ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿದ್ದವು. ಹೀಗಾಗಿ ಹೆಸರು ಬದಲಿಸುವಂತೆ ದೇವಸ್ಥಾನ ಆಡಳಿತ ಮಂಡಳಿ ಮಂಡ್ಯ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ.

ಇನ್ನು ಈ ಕುರಿತು ಮಂಡ್ಯ ಜಿಲ್ಲಾಧಿಕಾರಿ ದೇವಸ್ಥಾನ ಆಡಳಿತ ಮಂಡಳಿ, ಅರ್ಚಕರು ಮತ್ತು ಪರಿಚಾಲಕರ ಸಭೆ ನಡೆಸಿ, ಅಭಿಪ್ರಾಯ ನೀಡಲು ಸೂಚಿಸಿದ್ದರು. ಸಭೆಯಲ್ಲಿ ‘ಸಲಾಂ ಆರತಿ’ ಹೆಸರು ಬದಲಿಸುವಂತೆ ಒಕ್ಕೊರಲು ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ‘ದೀವಟಿಗೆ ಸಲಾಂ ಆರತಿ’ ಹೆಸರನ್ನು ಬದಲಿಸಿ ‘ಸಂಧ್ಯಾರತಿ’ ಎಂದು ನಾಮಕರಣ ಮಾಡಲು ಮಂಡ್ಯ ಜಿಲ್ಲಾಧಿಕಾರಿ ಮುಜರಾಯಿ ಆಯುಕ್ತರಿಗೆ ತಮ್ಮ ಅಭಿಪ್ರಾಯ ನೀಡಿದ್ದರು.

ಮಂಡ್ಯ ಜಿಲ್ಲಾಧಿಕಾರಿ ನೀಡಿರುವ ಅಭಿಪ್ರಾಯದ ಆಧಾರದ ಮೇಲೆ ಸಲಾಂ ಆರತಿಗೆ ಬ್ರೇಕ್ ಹಾಕಿ ‘ಸಂಧ್ಯಾರತಿ’ಗೆ ಚಾಲನೆ ನೀಡಲು ಮುಜರಾಯಿ ಇಲಾಖೆ ನಿರ್ಧರಿಸಿದೆ. ಈ ಬಗ್ಗೆ ಇನ್ನು ಕೆಲವೇ ದಿನಗಳಲ್ಲಿ ಮುಜರಾಯಿ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳಲಿದೆ ಎನ್ನಲಾಗಿದೆ.

Exit mobile version