ಆಗಸದಲ್ಲಿ ಸ್ತ್ರೀ ಶಕ್ತಿ ; ವಿಶ್ವದಲ್ಲೇ ಅತೀ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿರುವ ದೇಶ ಭಾರತ!

ಭಾರತದಲ್ಲಿ(India) ಒಟ್ಟು 17,726 ನೋಂದಾಯಿತ ಪೈಲಟ್‌ಗಳಿದ್ದು, ಅದರಲ್ಲಿ 2,764 ಮಹಿಳಾ ಪೈಲಟ್‌ಗಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಹೌದು, ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು(Women) ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಕೇವಲ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಮಹಿಳೆ, ಇಂದು ಪ್ರತಿಯೊಂದು ಕ್ಷೇತ್ರಗಳಲ್ಲೂ ತನ್ನ ಮೇಲುಗೈ ಸಾಧಿಸಿದ್ದಾಳೆ. ತೊಟ್ಟಿಲು ತೂಗುವ ಕೈ ಇಂದು ದೇಶದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ತಲುಪಿದೆ. ಇದೆಲ್ಲದರ ಜೊತೆಗೆ, ಬಾನಂಗಳದಲ್ಲಿ ಹಕ್ಕಿಯಂತೆ ಹಾರಾಡಬಲ್ಲೆವು ಎಂಬುದನ್ನೂ ಹೆಣ್ಣುಮಕ್ಕಳು ನಿರೂಪಿಸಿದ್ದಾರೆ. ಸಮೀಕ್ಷೆಯೊಂದರ ಪ್ರಕಾರ, ವಾಣಿಜ್ಯ ವಿಮಾನಗಳಲ್ಲಿ ಪೈಲಟ್ಗಳಾಗಿ(Pilot) ಕಾರ್ಯನಿರ್ವಹಿಸುವ ಮಹಿಳೆಯರ ಪ್ರಮಾಣ ಭಾರತದಲ್ಲಿ ಅತ್ಯಧಿಕವಾಗಿದೆ ಎಂದು ತಿಳಿಸಿದೆ.

ವಿಶ್ವದಲ್ಲಿರುವ ಒಟ್ಟು ಮಹಿಳಾ ಪೈಲಟ್ಗಳ ಪೈಕಿ ಶೇ.12 ರಷ್ಟು ಮಹಿಳೆಯರು ಭಾರತದಲ್ಲಿದ್ದಾರೆ. ಅಮೇರಿಕಾ(America) ಮತ್ತು ಆಸ್ಟ್ರೇಲಿಯಾ(Australia) ಸೇರಿದಂತೆ ಎಲ್ಲ ಪಾಶ್ಚಿಮಾತ್ಯ ದೇಶಗಳಲ್ಲಿರುವ ಮಹಿಳಾ ಪೈಲಟ್ಗಳಿಗಿಂತ ಹೆಚ್ಚಿನ ಮಹಿಳಾ ಪೈಲಟ್ಗಳು ಭಾರತದಲ್ಲಿದ್ದಾರೆ. ಇದು ನಾವು ಹೆಮ್ಮೆ ಪಡುವ ವಿಚಾರವೇ ಸರಿ. ಜಾಗತಿಕವಾಗಿ ಒಟ್ಟು ಪೈಲಟ್ಗಳ ಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣ ಶೇ.5 ಕ್ಕಿಂತ ಕಡಿಮೆ ಇದೆ ಎಂದು ಇಂಟರ್ನ್ಯಾಷನಲ್ ಸೊಸೈಟಿ ಆಫ್ ವುಮನ್ ಏರ್ಲೈನ್ ಪೈಲಟ್ಸ್ ಅಂದಾಜಿಸಿದೆ.


ಬಹಳಷ್ಟು ಮಂದಿ ಭಾರತೀಯ ಮಹಿಳೆಯರು ಪೈಲಟ್ಗಳಾಗಲು ಮುಂದೆ ಬರುತ್ತಿದ್ದಾರೆ. ಇದಕ್ಕೆ ಅನೇಕ ಕಾರಣಗಳೂ ಇವೆ, ಕೇಂದ್ರ ಸರ್ಕಾರ(Central Government) ಕಡ್ಡಾಯಪಡಿಸಿದ ಸಮಾನ ವೇತನ, ಸುರಕ್ಷಿತ ಕೆಲಸದ ಸ್ಥಳ, ಡೇ ಕೇರ್ ವ್ಯವಸ್ಥೆ ಹೀಗೆ ವಿಮಾನಯಾನ ಕ್ಷೇತ್ರದಲ್ಲಿ ಬಹಳಷ್ಟು ಪ್ರಯೋಜನಗಳು ಮಹಿಳೆಯರಿಗೆ ಇವೆ ಎಂದು ಜೆಟ್ ಏರ್ವೇಸ್ನಲ್ಲಿ ಹಿರಿಯ ತರಬೇತುದಾರರಾಗಿರುವ ಶ್ವೇತಾ ಸಿಂಗ್ ಅಭಿಪ್ರಾಯಪಡುತ್ತಾರೆ.

ಆದರೆ “ಪುರುಷ ಪ್ರಧಾನವಾದ ಈ ಕ್ಷೇತ್ರಕ್ಕೆ ಲಗ್ಗೆ ಇಡುವುದು ಸುಲಭವೇನೂ ಆಗಿರಲಿಲ್ಲ. ನಾನು 20 ವರ್ಷಗಳ ಹಿಂದೆ ಮಹಿಳೆಯರಿಗೆ ಸಾಮಾನ್ಯವಾಗಿಲ್ಲದ ಈ ವೃತ್ತಿಯನ್ನು ಮೊಟ್ಟಮೊದಲ ಬಾರಿಗೆ ಆಯ್ಕೆ ಮಾಡಿಕೊಳ್ಳುವಾಗ ತಂದೆ-ತಾಯಿಯ ಮನವೊಲಿಸಲು ಮತ್ತು ಕಾಕ್ಪಿಟ್ ಪುರುಷ ಸಹೋದ್ಯೋಗಿಗಳನ್ನು ನಿಭಾಯಿಸಲು ಸಾಕಷ್ಟು ಕಷ್ಟಪಟ್ಟಿದ್ದೆ. ಆದರೆ ಇಂದು ಮಹಿಳೆಯರಿಗೆ ಸುಲಭ ವೃತ್ತಿ ಅವಕಾಶವಿದೆ” ಎಂದು ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.


ಸದ್ಯ, ವಿಮಾನಯಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಮುಂದಿನ 20 ವರ್ಷಗಳಲ್ಲಿ 7.9 ಲಕ್ಷ ಪೈಲಟ್ಗಳು ಬೇಕಾಗುತ್ತಾರೆ ಎಂದು ಬೋಯಿಂಗ್ ಕಂಪನಿ ಅಂದಾಜು ಮಾಡಿದೆ. ಲಿಂಗ ಬೇಧವಿಲ್ಲದೆ ಮಹಿಳಾ ಪೈಲಟ್ಗಳಿಗೆ ಸಂಬಳ ನೀಡಲಾಗುತ್ತದೆ. ಹಾರಾಟ ಭತ್ಯೆ ಸೇರಿದಂತೆ ಮಹಿಳಾ ಪೈಲಟ್ಗಳಿಗೆ ನೀಡುವ ಪ್ರಾರಂಭಿಕ ಸಂಬಳ $ 25,000 ದಿಂದ $ 47,000 ಇರುತ್ತದೆ. ಇದು ಕೂಡ ಮಹಿಳೆಯರು ಈ ಕ್ಷೇತ್ರದತ್ತ ವಾಲಲು ಪ್ರಮುಖ ಕಾರಣವಾಗಿದೆ.


ಭಾರತದಲ್ಲಿ ಮಹಿಳಾ ಪೈಲಟ್‌ಗಳ ಶೇಕಡಾವಾರು ಪ್ರಮಾಣವು ಅಮೆರಿಕ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹೆಚ್ಚಿನ ಪಾಶ್ಚಿಮಾತ್ಯ ದೇಶಗಳಿಗಿಂತ ಎರಡು ಪಟ್ಟು ಹೆಚ್ಚಾಗಿದೆ ಎಂದು ವರದಿಯೊಂದು ತಿಳಿಸಿದೆ. ಒಟ್ಟಾರೆ ಇಂದು ಮಹಿಳೆಯರು ಸರ್ವ ಕ್ಷೇತ್ರಗಳಿಗೂ ಕಾಲಿರಿಸಿದ್ದು, ದೇಶಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.

Exit mobile version