ಎಂ.ಟಿ.ಆರ್(MTR) ರವೆ ಇಡ್ಲಿ ಹಿಂದಿದೆ ರೋಚಕ ಇತಿಹಾಸ ; ಓದಿ ನೋಡಿ

MTR

ಮುಂಜಾನೆ ಎದ್ದು ಕೆಲಸಕ್ಕೆ ಹೋಗುವ ಬಹಳಷ್ಟು ಮಂದಿಯ ದಿನ ಆರಂಭವಾಗುವುದೇ ಹೋಟೆಲ್ ನಲ್ಲಿ(Hotel) ಒಂದು ಪ್ಲೇಟ್ ಇಡ್ಲಿ(Idly) ತಿನ್ನುವುದರಿಂದ. ಇನ್ನು ಎಷ್ಟೋ ಜನರಿಗೆ ಬೀದಿ ಬದಿಯ ಸಣ್ಣ ಸಣ್ಣ ಗಾಡಿಗಳಲ್ಲಿ ಮಾಡಲ್ಪಡುವ ಇಡ್ಲಿಗಳೇ ಹೆಚ್ಚು ರುಚಿ. ನಮ್ಮ ಬೆಂಗಳೂರಿನಲ್ಲಿರುವ ವಿದ್ಯಾರ್ಥಿ ಭವನ(Vidhyarthi Bhavan), ಮಾವಳ್ಳಿ ಟಿಪಿನ್ ರೂಮ್ಸ್ (MTR) ಗಳಂತಹ ಊಟದ ಮನೆಗಳಲ್ಲಿ ತಯಾರಾಗುವ ಇಡ್ಲಿಗಳಂತೂ ಜನಗಳಿಗೆ ಅಚ್ಚು-ಮೆಚ್ಚು. ಹಲವಾರು ಮಂದಿಯ ನೆಚ್ಚಿನ ತಿಂಡಿಯಾದ ಇಡ್ಲಿಯ ಇತಿಹಾಸವನ್ನು ತಿಳಿಯೋಣ ಬನ್ನಿ.


ಮೊಟ್ಟ ಮೊದಲ ಬಾರಿಗೆ ಇಡ್ಲಿಯ ಬಗ್ಗೆ ಕ್ರಿಸ್ತ ಶಕ 920 ರಲ್ಲಿ ಶಿವಕೋಟ್ಯಾಚಾರ್‍ಯರು ಬರೆದಿರುವ “ವಡ್ಡಾರಾದನೆ”ಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಇಡ್ಲಿ ಮಾಡುವ ಬಗೆ ಸರಿಸುಮಾರು ಕ್ರಿಸ್ತಶಕ 700ರ ಹಿಂದೆಯೇ ತಿಳಿದಿತ್ತು. ವಡ್ಡಾರಾದನೆಯಲ್ಲಿ ಹೇಳಿರುವ ಪ್ರಕಾರ, ಅಂದಿನ ದಿನಗಳಲ್ಲಿ ಇಡ್ಲಿಯನ್ನು ಹುದುಗೆಬ್ಬಿಸಿದ ಉದ್ದಿನ ಹಿಟ್ಟಿನಿಂದ ಮಾಡಲಾಗುತಿತ್ತು. ನಮಗೆಲ್ಲ ತಿಳಿದಿರುವಂತೆ ಸಾಮಾನ್ಯವಾಗಿ ಇಡ್ಲಿಯನ್ನು ಮಾಡಲು ಅಕ್ಕಿಯನ್ನು ಬಳಸಲಾಗುತ್ತದೆ. ಆದರೆ, ಇಂದಿನ ದಿನಗಳಲ್ಲಿ ಹಲವಾರು ಬಗೆಯ ಪದಾರ್ಥಗಳಿಂದ ಇಡ್ಲಿಯನ್ನು ಮಾಡಲಾಗುತ್ತಿದೆ.

ಇನ್ನು ರವೆ ಇಡ್ಲಿ ಪರಿಚಯವಾದ ರೀತಿಯಂತೂ ಗಮನ ಸೆಳೆಯುವಂತದ್ದು. ಎರಡನೇ ಮಹಾಯುದ್ದದ ಸಮಯದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಅಕ್ಕಿಯ ಪೂರೈಕೆ ಕಡಿಮೆಯಾಗಿತ್ತು. ಈ ತೊಡಕನ್ನು ನೀಗಿಸಲು ಎಮ್. ಟಿ. ಆರ್ ಊಟದ ಮನೆಯವರು ರವೆಯನ್ನು ಬಳಸಿ ಇಡ್ಲಿಯನ್ನು ಮಾಡಲು ಮುಂದಾದರು. ಆಗ ಹುಟ್ಟಿದ್ದೇ ನಮ್ಮಅಚ್ಚುಮೆಚ್ಚಿನ “ರವೆ ಇಡ್ಲಿ”. ಇತ್ತೀಚಿನ ದಿನಗಳಲ್ಲಿ ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ತಟ್ಟೆ ಇಡ್ಲಿ ಹೀಗೆ ತರಾವರಿ ಇಡ್ಲಿಗಳನ್ನು ಮಾಡುವ ಬಗೆ ನಮಗೆ ತಿಳಿದಿದೆ.

ಈ ಇಡ್ಲಿಗಳನ್ನು ಇನ್ನಷ್ಟು ರುಚಿಯಾಗಿಸಲು ಬಾಳೆಯ ಎಲೆ, ಅರಿಶಿನದ ಎಲೆ , ಹಲಸಿನ ಎಲೆಗಳನ್ನೂ ಕೂಡ ಬಳಸುವುದುಂಟು. ಏನೇ ಇರಲಿ, ಇಡ್ಲಿಗೂ ನಮಗೂ ಬಿಡಲಾರದ ನಂಟು ಎನ್ನುವುದಂತೂ ನಿಜ.

Exit mobile version