ಉದ್ದವ್ ರಾಜೀನಾಮೆ ಫಿಕ್ಸ್ ; ‘ಮಾತೋಶ್ರೀ’ಯಲ್ಲಿ ಮಡುಗಟ್ಟಿದ ಮೌನ

ಮಹಾರಾಷ್ಟ್ರದ(Maharashtra) ರಾಜಕೀಯದಲ್ಲಿ ‘ಮಾತೋಶ್ರೀ’ ನಿವಾಸಕ್ಕೆ ಅದರದೇ ಆದ ಘನತೆ ಇದೆ. ಬಾಳಾ ಸಾಹೇಬ್ ಠಾಕ್ರೆ ಇಡೀ ಮಹಾರಾಷ್ಟ್ರವನ್ನು ಅಧಿಕಾರವಿಲ್ಲದೇ ಆಳಿದ್ದು, ಇದೆ ಮಾತೋಶ್ರೀ ನಿವಾಸದಿಂದ. ಒಂದು ಕಾಲದಲ್ಲಿ ರಾಜಕೀಯ(Political) ಶಕ್ತಿ ಕೇಂದ್ರವಾಗಿದ್ದ ಈ ನಿವಾಸ ಇದೀಗ ತನ್ನ ರಾಜಕೀಯ ಶಕ್ತಿಯನ್ನು ಕಳೆದುಕೊಂಡಿದೆ.

ಬಾಳಾ ಸಾಹೇಬ್ ಠಾಕ್ರೆ ಎಂಬ ಅಪ್ಪಟ ಹಿಂದುತ್ವವಾದಿ ಕಟ್ಟಿದ ಶಿವಸೇನೆ(Shivasena), ರಾಜಕೀಯ ಸ್ಥಿತ್ಯಂತರಗಳಿಗೆ ಸಿಕ್ಕು ವಿಭಜನೆಯಾಗುವ ಭೀತಿಯಲ್ಲಿದೆ. ಅಧಿಕಾರಕ್ಕಾಗಿ ನಂಬಿಕೊಂಡು ಬಂದ ಸೈದ್ದಾಂತಿಕ ನೆಲೆಯನ್ನೇ ಮರೆತು, ಮಾಡಿಕೊಂಡ ಅಸಹಜ ಹೊಂದಾಣಿಕೆಯ ಬಿಸಿ ತಳಮಟ್ಟದ ಕಾರ್ಯಕರ್ತರನ್ನು ಬಹುವಾಗಿ ತಟ್ಟಿದೆ. ದಶಕಗಳ ಕಾಲ ಕಾಂಗ್ರೆಸ್(Congress) ಮತ್ತು ಎನ್‍ಸಿಪಿ(NCP) ವಿರುದ್ದ ಹಿಂದುತ್ವಕ್ಕಾಗಿ ಹೋರಾಡಿದ ಶಿವಸೇನೆ ಅಧಿಕಾರಕ್ಕಾಗಿ ಕಾಂಗ್ರೆಸ್-ಎನ್‍ಸಿಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗಲೇ ಶಿವಸೈನಿಕರಲ್ಲಿ ಅಸಮಾಧಾನ ಮೂಡಿತ್ತು.

ಇನ್ನು ಬಾಳಾ ಠಾಕ್ರೆ ನಂತರ ಶಿವಸೇನೆಯ ಚುಕ್ಕಾಣಿ ಹಿರಿಯ ಮಗ ಉದ್ದವ್ ಠಾಕ್ರೆ ಕೈಗೆ ಸಿಕ್ಕಿತು. ಆದರೆ ತಂದೆಗಿದ್ದ ಬದ್ದತೆ, ರಾಜಕೀಯ ಗಟ್ಟಿ ನಿಲುವು, ಕಿಂಗ್ ಮೇಕರ್ ಇಮೇಜ್ ಇವೆಲ್ಲವನ್ನು ನಿಭಾಯಿಸುವಲ್ಲಿ ಉದ್ದವ್ ಠಾಕ್ರೆ ಅಕ್ಷರಶಃ ಎಡವಿದರು. ಬಾಳಾ ಠಾಕ್ರೆ ಎಂದಿಗೂ ಅಧಿಕಾರಕ್ಕಾಗಿ ಹವಣಿಸಲಿಲ್ಲ. ‘ನಾನು ಎಂದಿಗೂ ಕಿಂಗ್ ಮೇಕರ್’ ಎನ್ನುತ್ತಾ, ಅಧಿಕಾರದಿಂದ ದೂರವಿದ್ದು, ಅಧಿಕಾರವನ್ನು ಚಲಾಯಿಸಿದರು. ಆದರೆ ಉದ್ದವ್ ಠಾಕ್ರೆ ತಂದೆಯ ಸಿದ್ದಾಂತವನ್ನು ಮರೆತು ನೇರವಾಗಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕಾಗಿ ಅನೇಕ ಹೊಂದಾಣಿಕೆ ಮಾಡಿಕೊಂಡರು.

ಆದರೆ ಶಿವಸೇನೆಯ ಆತ್ಮ ‘ಹಿಂದುತ್ವ’ದ ಜೊತೆಗೂ ಉದ್ದವ್ ಠಾಕ್ರೆ ಹೊಂದಾಣಿಕೆ ಮಾಡಿಕೊಂಡುಬಿಟ್ಟರು. ಇದುವೇ ಶಿವಸೇನೆಯ ಚರಮ ಗೀತೆಯ ಮೊದಲ ಮುನ್ನುಡಿಯಾಯಿತು. ಪಕ್ಷದೊಳಗಿನ ಅಸಮಾಧಾನ ನಿಧಾನವಾಗಿ ಒಗ್ಗೂಡುತ್ತಾ ಇಂದು ದೊಡ್ಡದಾಗಿ ಸ್ಪೋಟಗೊಂಡಿದೆ. ಉದ್ದವ್ ಠಾಕ್ರೆ ರಾಜೀನಾಮೆ(Resignation) ನೀಡುವ ಸಾಧ್ಯತೆ ಹೆಚ್ಚಿದೆ. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ತೊರೆದು, ಉದ್ದವ್ ಮಾತೋಶ್ರೀಗೆ ಮರಳಿದ್ದಾರೆ. ಆದರೆ ಮಾತೋಶ್ರೀಯಲ್ಲಿ ಮೌನ ಮಡುಗಟ್ಟಿದೆ. ಒಂದು ಕಾಲದ ರಾಜಕೀಯ ಶಕ್ತಿಕೇಂದ್ರ ಇದೀಗ ಮೌನದ ನೆಲೆಬೀಡಾಗಿದೆ.

Exit mobile version