ಕರ್ನಾಟಕ ಹೈಕೋರ್ಟ್ ನೀಡಿದ್ದ ಹಿಜಾಬ್ ತೀರ್ಪಿನ ವಿರುದ್ಧದ ಅರ್ಜಿಗಳ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ

Hijab

ಶಾಲೆಯ ತರಗತಿಯೊಳಗೆ ಹಿಜಾಬ್(Hijab) ಧರಿಸುವಂತಿಲ್ಲ, ಹಿಜಾಬ್ ನಿಷೇಧ ಎಂದು ಕರ್ನಾಟಕ ಹೈಕೋರ್ಟ್(Karnataka Highcourt) ನೀಡಿರುವ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಂದಿನ ವಾರದಿಂದ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್(SupremeCourt) ಬುಧವಾರ ಸಮ್ಮತಿಸಿದೆ. ಕರ್ನಾಟಕ ಹೈಕೋರ್ಟ್ ಮಾರ್ಚ್ 15 ರಂದು ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯ ಅಡಿಯಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿತು.

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ(NV Raman) ನೇತೃತ್ವದ ಪೀಠವು ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಸ್ತಾಪಿಸಿದ ನಂತರ ಮುಂದಿನ ವಾರ ಸೂಕ್ತ ಪೀಠದ ಮುಂದೆ ವಿಷಯವನ್ನು ಪಟ್ಟಿ ಮಾಡಲು ಒಪ್ಪಿಕೊಂಡಿತು. ಮಾರ್ಚ್‌ನಲ್ಲಿ ಈ ಪ್ರಕರಣಗಳನ್ನು ಸಲ್ಲಿಸಲಾಗಿದೆ. ಆದರೆ ಇನ್ನೂ ಪಟ್ಟಿ ಮಾಡಲಾಗಿಲ್ಲ ಎಂದು ಪ್ರಶಾಂತ್ ಭೂಷಣ್ ಹೇಳಿದರು.

ಅಷ್ಟಕ್ಕೂ ಏನಿದು ಪ್ರಕರಣ? : ಈ ವರ್ಷದ ಜನವರಿಯಲ್ಲಿ, ಉಡುಪಿಯ ಶಾಲೆಯೊಂದರಲ್ಲಿ ತರಗತಿಯೊಳಗೆ ಹಿಜಾಬ್ ಅನ್ನು ನಿಷೇಧಿಸಿದ ನಂತರ ಕರ್ನಾಟಕದಲ್ಲಿ ಭಾರೀ ವಿವಾದ ಹುಟ್ಟಿಕೊಂಡಿತು. ಈ ವಿವಾದ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿ, ಆದೇಶವನ್ನು ಪ್ರಶ್ನಿಸುವ ಹಂತಕ್ಕೆ ವಿದ್ಯಾರ್ಥಿನಿಯರು ತಲುಪಿದರು. ಫೆಬ್ರವರಿ 25 ರಂದು ಪ್ರಕರಣದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿತ್ತು. ನಂತರ, ಹಿಜಾಬ್ ನಿಷೇಧದ ಬಗ್ಗೆ ಪ್ರತಿಭಟನೆಗಳು, ಆರೋಪಗಳು ಮತ್ತು ಪ್ರತ್ಯಾರೋಪಗಳು ತೀವ್ರ ಭುಗಿಲೆದ್ದವು.

ಮಾರ್ಚ್ 15 ರಂದು ಕರ್ನಾಟಕ ಹೈಕೋರ್ಟ್ ಹಿಜಾಬ್ ಧರಿಸುವುದು ಇಸ್ಲಾಂನ ಅಗತ್ಯ ಆಚರಣೆಯ ಅಡಿಯಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿತು. ಕರ್ನಾಟಕ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್, ಸಮವಸ್ತ್ರ ಧರಿಸುವುದರ ಮೇಲಿನ ನಿರ್ಬಂಧಗಳು ಸಮಂಜಸವಾಗಿದೆ ಮತ್ತು ವಿದ್ಯಾರ್ಥಿಗಳು ಅದನ್ನು ವಿರೋಧಿಸಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿತು. ಇದಾದ ಬಳಿಕ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಕರ್ನಾಟಕದ ಮುಸ್ಲಿಂ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು.

ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿಗಳು ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಮುಸ್ಲಿಂ ವಿದ್ಯಾರ್ಥಿನಿ ನಿಬಾ ನಾಜ್ ಪರವಾಗಿ ವಿಶೇಷ ಅರ್ಜಿ ಸಲ್ಲಿಸಲಾಗಿತ್ತು. ಕರ್ನಾಟಕ ಶಿಕ್ಷಣ ಕಾಯಿದೆಯಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಸಮವಸ್ತ್ರ ಧರಿಸಲು ಅವಕಾಶವಿಲ್ಲ ಮತ್ತು ಹಿಜಾಬ್ ಧರಿಸುವ ಹಕ್ಕು ಖಾಸಗಿತನದ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಗಮನಿಸಲು ಹೈಕೋರ್ಟ್ ವಿಫಲವಾಗಿದೆ ಎಂದು ಅರ್ಜಿದಾರರು ಸಲ್ಲಿಸಿದ್ದಾರೆ.

ಸದ್ಯ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರಿಂಕೋರ್ಟ್ ಮುಂದಿನ ವಾರದಿಂದ ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ.

Exit mobile version