ಕರ್ನಾಟಕ ಬರ ಪರಿಹಾರಕ್ಕೆ ಇದುವರೆಗೂ ಕೇಂದ್ರ ಸರ್ಕಾರ 1 ರೂ. ಬಿಡುಗಡೆ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ

Mangalore: ಕೇಂದ್ರಸರ್ಕಾರವು ಕರ್ನಾಟಕಕ್ಕೆ ಬರಪರಿಹಾರ ಬಿಡುಗಡೆ ಮಾಡುವ ವಿಚಾರದಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು.

ಕೇಂದ್ರದಿಂದ ಬರಪರಿಹಾರ ಬಂದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ” ರಾಜ್ಯದಲ್ಲಿ ಬರ ಅಧ್ಯಯನಕ್ಕೆ ಕೇಂದ್ರದಿಂದ ತಂಡ ಬಂದಿದ್ದು, ರಾಜ್ಯದಿಂದಲೂ ಎರಡು ಬಾರಿ ಮನವಿ ಸಲ್ಲಿಸಲಾಗಿದೆ. 236 ತಾಲ್ಲೂಕುಗಳಲ್ಲಿ 216 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.

ಸುಮಾರು 30 ಸಾವಿರ ಕೋಟಿಯಷ್ಟು ಬೆಳೆ ರಾಜ್ಯದಲ್ಲಿ ಹಾನಿಯಾಗಿದ್ದು, ಇನ್ನು ಸುಮಾರು 17,900 ಕೋಟಿ ಪರಿಹಾರವನ್ನು ಕೇಂದ್ರಕ್ಕೆ ಕೋರಲಾಗಿದೆ. ಇದುವರೆಗೂ ಒಂದು ರೂಪಾಯಿಯೂ ಕೂಡ ಕೇಂದ್ರದಿಂದ ಬಿಡುಗಡೆಯಾಗಿಲ್ಲ ಹಾಗೂ ಕೇಂದ್ರ ಸಚಿವರು, ರಾಜ್ಯ ಸಚಿವರನ್ನು ಭೇಟಿಯಾಗಲು ಸಮಯವನ್ನೂ ಕೊಡುತ್ತಿಲ್ಲ ಎಂದು ಮಂಗಳೂರಿನಲ್ಲಿ (Mangalore) ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ತಿಳಿಸಿದರು.

ಕಾಂಗ್ರೆಸ್ ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ
ಕಾಂಗ್ರೆಸ್ (Congress) ಶಾಸಕರಿಗೆ ಬಿಜೆಪಿಯವರು ಹಣದ ಆಮಿಷ ನೀಡುತ್ತಿರುವ ಬಗ್ಗೆ ಮಾಹಿತಿ ಇದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂಬುದು ತಿಳಿದಿದೆ. ಆದರೆ 50 ಕೋಟಿ, ಅಧಿಕಾರದ ಆಫರ್ (Offer) ನೀಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ಗೃಹಸಚಿವರ ಆಮಂತ್ರಣದ ಮೇರೆಗೆ ಅವರ ಮನೆಗೆ ಭೋಜನಕ್ಕೆ ಹೋಗಿರುವುದೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ತಿಳಿಸಿದರು.

ಭವ್ಯಶ್ರೀ ಆರ್.ಜೆ

Exit mobile version