ಲಂಕಾ ಪತನ ; 1 ಕೆ.ಜಿ ಚಿಕನ್‌ ಸಾವಿರ ರೂ. ಪೆಟ್ರೋಲ್‌ 283, ಶ್ರೀಲಂಕಾದ ಈ ದುರ್ಗತಿಗೆ ಕಾರಣ ಏನು?

srilanka

1 ಕೆ.ಜಿ ಚಿಕನ್‌ ಬೆಲೆ 1000ರೂ, ಪೆಟ್ರೋಲ್‌ 283, ಡೀಸೆಲ್ 220. ಲಂಕಾ ಪತನ, ಸಂಪೂರ್ಣ ದಿವಾಳಿಯಾಯ್ತು ಶ್ರೀಲಂಕಾ.

ಲಂಕೇಶ್ವರನ ನಾಡು ಸಾಲದಲ್ಲಿ ಮುಳುಗಿ ಹೋಯ್ತು. ಶ್ರೀಲಂಕಾದ ಈ ದುರ್ಗತಿಗೆ ಕಾರಣ ಏನು? ಅಸಲಿ ಕಥೆ ತಿಳಿಯೋಣ ಮುಂದೆ ಓದಿ.

1 ಕೆ.ಜಿ ಚಿಕನ್‌ ಬೆಲೆ 1000ರೂ, ಪೆಟ್ರೋಲ್‌ 283, ಡೀಸೆಲ್ 220,
ಒಂದು ಮೊಟ್ಟೆ ಬೆಲೆ 35 ರೂ. ಇದು ಶ್ರೀಲಂಕಾ ಪತನಕ್ಕೆ ಸಾಕ್ಷಿಯಾದ ಅಂಕಿ ಅಂಶಗಳು. ಇಲ್ಲಿ ಅನ್ನಕ್ಕೆ ಹಾಹಾಕಾರ ಆರಂಭವಾಗಿದೆ. ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೇರುತ್ತಿದೆ. ಒಂದು ಕೆ.ಜಿ ಚಿಕನ್‌ ಬೆಲೆ ಸಾವಿರ ರೂಪಾಯಿ. ಇಂದು ಮೊಟ್ಟೆ ಬೆಲೆ 35 ರೂಪಾಯಿ. ಇನ್ನು ಭಾರತಕ್ಕಿಂತ ಕಡಿಮೆ ಬೆಲೆಯಿದ್ದ ಪೆಟ್ರೋಲ್‌, ಡೀಸೆಲ್ ಬೆಲೆ ತಲಾ 283 ಹಾಗೂ 220 ರೂಪಾಯಿ ಆಗಿದೆ.

ಇಲ್ಲಿನ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಅಂದ್ರೆ ಅಡುಗೆ ಅನಿಲ ಬಡವರ, ಮಧ್ಯಮ ವರ್ಗದವರ ಕೈಗೆಟಕುತ್ತಿಲ್ಲ. 12.5 ಕೆ.ಜಿ ಗ್ಯಾಸ್‌ ಸಿಲಿಂಡರ್ ಬೆಲೆ 1,359 ರೂಪಾಯಿ ಆಗಿದೆ. ಹೆಚ್ಚಿನವರು ಅಡುಗೆಗಾಗಿ ಸೀಮೆಎಣ್ಣೆಯನ್ನು ಅವಲಂಭಿಸುತ್ತಿದ್ದಾರೆ. ಆದ್ರೆ ಈಗ ಸೀಮೆಎಣ್ಣೆಗೂ ಬರ ಬಂದಿದೆ. ಒಂದು ಲೀಟರ್‌ ಸೀಮೆಎಣ್ಣೆಗೆ ಕಿ.ಲೋ ಮೀಟರ್‌ಗಟ್ಟಲೆ ಕ್ಯೂ ನಿಲ್ಲುವಂತಾಗಿದೆ. ಆದ್ರೂ ಸೀಮೆಎಣ್ಣೆ ಸಿಗುತ್ತಿಲ್ಲ. ನಿನ್ನೆ ಸೀಮೆಎಣ್ಣೆಗಾಗಿ ಕ್ಯೂವಲ್ಲಿ ನಿಂತ ಇಬ್ಬರು ಸಾವನ್ನಪ್ಪಿದ್ರು.

ಶ್ರೀಲಂಕಾದ ಕಚ್ಚಾ ತೈಲದ ದಾಸ್ತಾನು ಮುಗಿದಿದೆ. ಕಾರಣ ದೇಶದ ಏಕೈಕ ತೈಲ ಸಂಸ್ಕರಣಾ ಘಟಕವನ್ನು ಭಾನುವಾರ ಮುಚ್ಚಲಾಗಿದೆಯೆಂದು ಶ್ರೀಲಂಕಾದ ಪೆಟ್ರೋಲಿಯಂ ಜನರಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಅಶೋಕ ರುಣವಾಲ ಹೇಳಿದ್ದಾರೆ. ಏಷ್ಯಾದಲ್ಲೇ ಅತ್ಯಧಿಕ ಹಣದುಬ್ಬರ :  ಕ್ಷಣ ಕ್ಷಣಕ್ಕೂ ಹಣದುಬ್ಬರ ಏರುತ್ತಲೇ ಇದೆ. ಪ್ರಸ್ತುತ ಹಣದುಬ್ಬರ 15.1% ದಾಖಲೆ ಮಟ್ಟ ತಲುಪಿದ್ದು, ಏಷ್ಯಾ ದೇಶಗಳಲ್ಲಿ ಇದು ಅತ್ಯಧಿಕ ಪ್ರಮಾಣವಾಗಿದೆ. ಅಹಾರ ಹಣದುಬ್ಬರ 25.7% ಪ್ರಮಾಣಕ್ಕೆ ತಲುಪಿದೆ ಎಂದು ವರದಿಯಾಗಿದೆ. ಹಣದುಬ್ಬರದ ಪರಿಣಾಮ ಶ್ರೀಲಂಕಾದಲ್ಲಿ ಅಗತ್ಯವಸ್ತುಗಳ ಬೆಲೆ ವಿಪರೀತ ಹೆಚ್ಚುತ್ತಿದೆ.
1 ಕಪ್ ಚಹಾ ಬೆಲೆ 100 ರೂ : ದಿನಬಳಕೆಯ ವಸ್ತುಗಳ ಬೆಲೆ ಏರಿಕೆಗೆ ಉದಾಹರಣೆ ಕೊಡುವುದಾದ್ರೆ 400 ಗ್ರಾಂ ಹಾಲಿನ ಪುಡಿಯ ಪೊಟ್ಟಣದ ಬೆಲೆ 250 ರೂಪಾಯಿಗೆ ತಲುಪಿದೆ. ಕಾಫಿ, ಚಹಾದ ಬೆಲೆಯೂ ವಿಪರೀತ ಹೆಚ್ಚಿದೆ. ಹೋಟೆಲ್ ಗಳಲ್ಲಿ 1 ಕಪ್ ಚಹಾದ ಬೆಲೆ 100 ರೂಪಾಯಿಗೆ ತಲುಪಿದೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ಮಂದಿ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.

ಡಾಲರ್ ಬೆಲೆ 276 : ಹೌದು, ಶ್ರೀಲಂಕಾದಲ್ಲಿ ಉಂಟಾದ ಬೀಕರ ಹಣದುಬ್ಬರ ಪರಿಣಾಮವಾಗಿ ಡಾಲರ್ ಎದುರು ಶ್ರೀಲಂಕಾ ರೂಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ಡಾಲರ್ ಬೆಲೆ 276 ರೂಪಾಯಿ ಆಗಿದೆ. ನಮ್ಮ ಭಾರತದ ಒಂದು ರೂಪಾಯಿ ಬೆಲೆ 76 ಆಗಿದೆ. ಈ ರೀತಿ ಶ್ರೀಲಂಕಾದ ಆರ್ಥಿಕತೆ ಈ ಪರಿ ನೆಲ ಕಚ್ಚಲು ಕಾರಣಗಳೇನು?
ಕೋವಿಡ್‌ ಕೊಟ್ಟ ಏಟು! ಕೊರೋನಾ ವೈರಸ್‌ ಕೊಟ್ಟ ಏಟಿಗೆ ಶ್ರೀಲಂಕಾದಂಥಾ ಅನೇಕ ದೇಶಗಳು ಹಣದುಬ್ಬರಕ್ಕೆ ತುತ್ತಾಗಿವೆ. ಅದರಲ್ಲೂ ವಿದೇಶಿ ವಿನಿಮಯವನ್ನೇ ನಂಬಿರುವ ರಾಷ್ಟ್ರಗಳ ಪರಿಸ್ಥಿತಿ ಬಿಗಡಾಯಿಸುತ್ತಿದೆ.

ಶ್ರೀಲಂಕಾದ ಒಟ್ಟು ಆರ್ಥಿಕತೆಯ ಶೇ. 10ರಷ್ಟು ಪಾಲನ್ನು ಪ್ರವಾಸೋದ್ಯಮವೇ ಆವರಿಸಿತ್ತು. ಆದ್ರೆ ಕೊರೋನಾ ಬಳಿಕ ಪ್ರವಾಸೋದ್ಯಮ ನೆಲಕಚ್ಚಿತು. ವಿದೇಶಿ ವಿನಿಮಯ ಸಂಪೂರ್ಣ ಕುಸಿದ ಕಾರಣ ಶ್ರೀಲಂಕಾ ಇವತ್ತು ಸಾಲದ ಸುಳಿಯಲ್ಲಿ ಸಿಲುಕಿ ಮುಳುಗುವ ಹಂತಕ್ಕೆ ತಲುಪಿದೆ. 100% ಸಾವಯವ ಕೃಷಿ. ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ಕಳೆದ ವರ್ಷ ಶ್ರೀಲಂಕಾವನ್ನು ಸಾವಯವ ಕೃಷಿ ರಾಷ್ಟ್ರ ಎಂದು ಘೋಷಿಸಿದ್ರು. ಇದರಿಂದ ಇಲ್ಲಿ ತೀವ್ರ ಆಹಾರ ಉತ್ಪನ್ನದ ಕೊರತೆ ಉಂಟಾಯಿತು.

ಏಕಾಏಕಿ ಮಾಡಿದ ಘೋಷಣೆ ಈಗ ಜನ ಹಿಡಿ ಅನ್ನಕ್ಕಾಗಿ ಸಾಯುವ ಪರಿಸ್ಥಿತಿ ಉಂಟಾಗಿದೆ. ಜೊತೆಗೆ ದೇಶದ ಕಳಪೆ ಆರ್ಥಿಕ ನೀತಿ ಶ್ರೀಲಂಕಾವನ್ನು ಈ ದುಸ್ಥಿತಿಗೆ ನೂಕಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧ ಕಾರಣನಾ? ಲಂಕಾ ಪತನಕ್ಕೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಗಾಯದ ಮೇಲೆ ಬರೆ ಎಳೆದಿದೆ. ಅದು ಹೇಗೆ ಗೊತ್ತಾ? ಅಂಕಿ ಅಂಶಗಳ ಪ್ರಕಾರ ಶ್ರೀಲಂಕಾಕ್ಕೆ ಬರುವ ಪ್ರವಾಸಿಗರ ಪೈಕಿ ಶೇಕಡಾ 25 ರಷ್ಟು ಮಂದಿ ಉಕ್ರೇನ್ ಮತ್ತು ರಷ್ಯಾದಿಂದ ಬಂದವರು.

ರಷ್ಯಾ ಉಕ್ರೇನ್‌ ಯುದ್ಧ ಸಾರಿದ ಪರಿಣಾಮ ಶ್ರೀಲಂಕಾದಲ್ಲಿರುವ ಪ್ರವಾಸಿಗರಿಗೆ ಹಿಂತಿರುಗಲು ಸಾಧ್ಯವಾಗುತ್ತಿಲ್ಲ. ಅವರು ಹಣ ಕೊಡಲೂ ವಿಫಲರಾಗಿದ್ದರಿಂದ ಶ್ರೀಲಂಕಾದ ಮುಖ್ಯ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಒಟ್ಟಾರೆ ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾ ಪಾಪರ್ ಆಗಿದೆ. ಇದು ಭಾರತಕ್ಕೂ ಎಚ್ಚರಿಕೆಯ ಗಂಟೆ. ಕೆಟ್ಟ ಆರ್ಥಿಕ ನೀತಿ ಒಂದು ದೇಶವನ್ನು ಹೇಗೆ ದಿವಾಳಿ ಮಾಡುತ್ತೆ ಅನ್ನೋದಕ್ಕೆ ಶ್ರೀಲಂಕಾವೇ ಸಾಕ್ಷಿ.
Exit mobile version