2022-23ರ ಶೈಕ್ಷಣಿಕ ಪಠ್ಯದಲ್ಲಿ ಹೊಸ ಅಧ್ಯಾಯಗಳು!

chakratheertha

ಬರಹಗಾರ(Writer) ರೋಹಿತ್ ಚಕ್ರತೀರ್ಥ(Rohit Chakratheertha) ನೇತೃತ್ವದ ರಾಜ್ಯ ಶೈಕ್ಷಣಿಕ ಪಠ್ಯ ಪರಿಶೀಲನಾ ಸಮಿತಿ ತನ್ನ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿತ್ತು.

ಇದೀಗ ಸಮಿತಿಯ ಶಿಫಾರಸಿನಂತೆ ಅನೇಕ ಬದಲಾವಣೆಗಳನ್ನು ಪಠ್ಯದಲ್ಲಿ ಮಾಡಲಾಗಿದೆ. ಕೆಲ ಅಧ್ಯಾಯಗಳನ್ನು ಕೈಬಿಟ್ಟು, ಹೊಸ ಅಧ್ಯಾಯಗಳನ್ನು ಸೇರಿಸಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯೂ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಆರ್‍ಎಸ್‍ಎಸ್ ಸಂಸ್ಥಾಪಕ ಹೆಡ್ಗೆವಾರ್ ಅವರ “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಭಾಷಣವನ್ನು ಸೇರಿಸಲಾಗಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ನಾವು ಹೆಡ್ಗೆವಾರ್ ಅವರನ್ನು ಬರಹಗಾರರಾಗಿ ಆಯ್ಕೆ ಮಾಡಿದ್ದೇವೆ.

ಅವರ ಸಿದ್ಧಾಂತ ಮತ್ತು ಸಂಘಟನೆಯ ಆಧಾರದ ಮೇಲೆ ಅಲ್ಲ ಎಂದು ತಿಳಿಸಿದ್ದಾರೆ. ಇನ್ನು ಬರಹಗಾರ ಶಿವಾನಂದ ಕಳವೆ ಅವರ “ಸ್ವದೇಶಿ ಸೂತ್ರದ ಸರಳ ಹಬ್ಬ” ಮತ್ತು ಎಂ. ಗೋವಿಂದ ಪೈ ಅವರ “ನಾನು ಪ್ರಾಸ ಬಿಟ್ಟ ಕಥೆ” ಪಠ್ಯಗಳನ್ನು ಸೇರಿಸಲಾಗಿದ್ದರೆ, ಬದಲಾಗಿ ಎಡಪಂಥೀಯ ಚಿಂತಕ ಜಿ. ರಾಮಕೃಷ್ಣ ಅವರ “ಭಗತ್ ಸಿಂಗ್” ಮತ್ತು ಪಿ. ಲಂಕೇಶ್ ಅವರ “ಮೃಗ ಮಟ್ಟು ಸುಂದರಿ” ಪಾಠಗಳನ್ನು ಕೈಬಿಡಲಾಗಿದೆ.

ಅದೇ ರೀತಿ ವಿದ್ವಾಂಸರಾದ ದಿವಂಗತ ಬನ್ನಂಜೆ ಗೋವಿಂದಾಚಾರ್ಯರ “ಶುಕನಾಶನ ಉಪದೇಶ” ಮತ್ತು ಶತಾವಧಾನಿ ಆರ್. ಗಣೇಶ್ ಅವರ “ಶ್ರೇಷ್ಠ ಭಾರತೀಯ ಚಿಂತನೆಗಳು” ಸೇರಿಸಿದ್ದರೆ, ಎ.ಎನ್. ಮೂರ್ತಿ ರಾವ್ ಅವರ “ವ್ಯಾಘ್ರ ಕಥೆ”, ಸಾರಾ ಅಬೂಬಕ್ಕರ್ ಅವರ “ಯುದ್ಧ”, ಮತ್ತು ಶಿವಕೋಟ್ಯಾಚಾರ್ಯರ “ಸುಕುಮಾರ ಸ್ವಾಮಿ ಕಥೆ”ಯನ್ನು ಕೈಬಿಡಲಾಗಿದೆ. ಇನ್ನು ನೂತನ ಪಠ್ಯದ ಕುರಿತು ಮಾತನಾಡಿರುವ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ, ಹೊಸ ಶೈಕ್ಷಣಿಕ ಪಠ್ಯದಲ್ಲಿ ಎಲ್ಲ ರೀತಿಯ ಚಿಂತನೆಗಳಿಗೂ ಅವಕಾಶ ನೀಡಲಾಗಿದೆ.

ಇದು ಮಕ್ಕಳ ಮೇಲೆ ಸೈದ್ಧಾಂತಿಕ ಹೇರಿಕೆ ಅಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯಿಂದ ಯಾವುದೇ ಒತ್ತಡ ಈ ಪಠ್ಯದಲ್ಲಿ ಇಲ್ಲ ಎಂದಿದ್ದಾರೆ.

Exit mobile version