ಮಂಗಳೂರಿನಲ್ಲಿ ಮತ್ತೆ ಮತಾಂತರಕ್ಕೆ ಪ್ರಚೋದನೆ

ಮಂಗಳೂರು  ಸೆ 25 : ರಾಜ್ಯದಲ್ಲಿ ಮತಾಂತರ ನಿ‍ಷೇಧ ಕಾಯ್ದೆ ಜಾರಿಗೊಳಿಸಲು ಒಂದೆಡೆ ಸರ್ಕಾರ ಸನ್ನದ್ದವಾಗಿದ್ದರೆ ಇನ್ನೊಂದೆಡೆ ಕೆಲವು ಧರ್ಮಗಳು ಎಗ್ಗಿಲ್ಲದೆ ಮತಾಂತರ ಮಾಡುತ್ತಿರುವುದು ಪತ್ತೆಯಾಗುತ್ತಿದೆ. ಇದೀಗ ಮತಾಂತರಕ್ಕೆ ಪ್ರಚೋದಿಸುವ ಕ್ರೈಸ್ತ ಧರ್ಮ ಪ್ರಚಾರದ ಪತ್ರಗಳು ಪತ್ತೆ ಮಂಗಳೂರು ಹೊರ ವಲಯದಲ್ಲಿ ಪತ್ತೆಯಾಗಿದ್ದು ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದಂತಾಗಿದೆ. 

ಮಂಗಳೂರು ಹೊರವಲಯದ ಸೋಮೇಶ್ವರ ಬಳಿಯ ಮನೆಗಳಲ್ಲಿ ಇಂದು  ಅನೇಕ ರೀತಿಯ ಮತಾಂತರಕ್ಕೆ ಸಂಬಂಧಪಟ್ಟಂತ ಪತ್ರಗಳು,  ಪುಸ್ತಕಗಳು  ಪತ್ತೆಯಾಗಿದೆ. ಕ್ರೈಸ್ತ ಧರ್ಮ ಪ್ರಚೋದಿಸುವ ಭಿತ್ತಿ ಪತ್ರ ಹಾಗೂ ಪುಸ್ತಕಗಳನ್ನು ಸೋಮೇಶ್ವರ ಅನೇಕ ಮನೆಗಳ ಮುಂದೆ ಇಟ್ಟು ಹೋಗಿರುವ ಅಪರಿಚಿತ ವ್ಯಕ್ತಿಗಳು ಮತಾಂತರಕ್ಕೆ ಪ್ರಚೋದಿಸುತ್ತಿದ್ದಾರೆ ಎನ್ನಲಾಗಿದೆ.  ಸೋಮೇಶ್ವರದ ಉಳ್ಳಾಲ ರೈಲ್ವೇ ನಿಲ್ದಾಣದ ಹಿಂಭಾಗದ 15ಕ್ಕೂ ಅಧಿಕ ಮನೆಗಳಲ್ಲಿ ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ಅನೇಕ ಪುಸ್ತಗಳು, ಪತ್ರಗಳು ಪತ್ತೆಯಾಗಿವೆ.

ಈ ವಸ್ತುಗಳು ಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ  ಉಳ್ಳಾಲ ಬಜರಂಗದಳದ ಕಾರ್ಯಕರ್ತರು ಭೇಟಿ ನೀಡಿ ಭಿತ್ತಿ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಲುಂಗಿ ಧರಿಸಿದ್ದ ಅಪರಿಚಿತ ವ್ಯಕ್ತಿ 15ರಷ್ಟು ಮನೆಗಳ ಗೇಟುಗಳಲ್ಲಿ ಭಿತ್ತಿ ಪತ್ರ ಇಟ್ಟು ತೆರಳಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕ್ರೈಸ್ತ ಧರ್ಮ ಪ್ರಚಾರಕ್ಕೆ ಸಂಬಂಧಿಸಿದಂತಹ  ವಿಚಾರಗಳನ್ನು ಒಳಗೊಂಡಂತಹ ಕನ್ನಡ ಹಾಗೂ ಮಲಯಾಳಂನಲ್ಲಿ ಬರೆದಿರುವ ಭಿತ್ತಿಪತ್ರ, ಪುಸ್ತಕಗಳು ಪ್ರತೀ ಮನೆಯ ಮುಂದೆಯೂ ಇರಿಸಲಾಗಿದೆ.  ಮತಾಂತರ ನಡೆಸುವ ಉದ್ದೇಶದಿಂದ  ಈ ಪ್ರಚೋದನೆ ಮಾಡಲು ಕೃತ್ಯ ಎಸಗಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕೇರಳ ಮೂಲದ ವ್ಯಕ್ತಿಗಳಿಂದ ಉಳ್ಳಾಲ ಭಾಗದಲ್ಲಿ ಮತಾಂತರ ನಡೆಯುತ್ತಿದೆ ಎಂದು ಇತ್ತೀಚಿನ ದಿನಗಳಲ್ಲಿ  ಆರೋಪ ಮಾಡಲಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಅನೇಕ ಘಟನೆಗಳು ಬೆಳಿಕಿಗೆ ಬರುತ್ತಿವೆ. ಈ ಹಿಂದೆಯೂ ಕೂಡ  ಬೇರೆ ಬೇರೆ ಸಮುದಾಯದವರನ್ನು ಕರೆಸಿ ಪ್ರಾರ್ಥನೆ ನಡೆಸುವುದು. ಅಕ್ರಮವಾಗಿ ಮತಾಂತರ ಯತ್ನ ನಡೆಸಿದ್ದು ಬೆಳಕಿಗೆ ಬಂದಿದ್ದು, ಈ ಘಟನೆ ಇದಕ್ಕೆ ಇನ್ನ್ಟ ಸಾಕ್ಷ್ಯ ಒದಗಿಸಿದಂತಾಗಿದೆ.  ಸದ್ಯ ಉಳ್ಳಾಲ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ವಿಚಾರಣೆ ಕೈಗೊಳ್ಳಲಾಗಿದೆ.

Exit mobile version