ಪ್ರೀತಿ-ಪ್ರೇಮದ ಆಳ-ಅಗಲ ಹುಡುಕುವುದು ಅಷ್ಟು ಸುಲಭವಲ್ಲ, ಹುಡುಕಲೂ ಹೋಗಬಾರದು. ಪ್ರೀತಿ(Love) ಯಾವಾಗ, ಯಾವ ರೀತಿಯಲ್ಲಿ, ಯಾರ ಮನದಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಬಹಳ ಕಷ್ಟ. ಆದರೆ ವಯಸ್ಸಿಗೆ ಬಂದ ಮೇಲೆ ಹುಡುಗ-ಹುಡುಗಿಯ ನಡುವೆ ಅನುರಾಗ ಅರಳುವುದು, ಆಕರ್ಷಣೆ ಮೂಡುವುದು ಸಹಜ. ಪ್ರತಿದಿನ ನಾವು ಅನೇಕ ಪ್ರೇಮಿಗಳನ್ನು ನೋಡುತ್ತೇವೆ, ಪ್ರೀತಿಯ ಬಗ್ಗೆ ಪುಂಖಾನು ಪುಂಖವಾಗಿ ಮಾತನಾಡುತ್ತೇವೆ, ಛೇಡಿಸುತ್ತೇವೆ. ಆದರೆ, ಪ್ರೀತಿ ಎಂದರೇನು? ಪ್ರೇಮ ಎಂದರೇನು? ಎಂದು ಸರಿಯಾಗಿ ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ನಾವು ಮಾಡುವುದಿಲ್ಲ.

ವಾಸ್ತವವಾಗಿ, ಈ ಜಗತ್ತಿನಲ್ಲಿ ಸರಿಯಾದ ವಿವರಣೆ ಇಲ್ಲದಂತಹ, ತರ್ಕಕ್ಕೆ ನಿಲುಕದಂತಹ ಮತ್ತು ಅವರವರ ಭಾವಕ್ಕೆ ತಕ್ಕಂತೆ ಹೊಸ ವಿವರಣೆ ಹುಟ್ಟುವಂತಹ ಪದವೇ ಪ್ರೀತಿ. ಪ್ರೀತಿ ಎನ್ನುವುದು ಕೇವಲ ಪದ ಮಾತ್ರವಲ್ಲ, ಪ್ರೀತಿಯ ಕುರಿತು ಗ್ರಂಥಗಳನ್ನೇ ಬರೆಯಬಹುದು. ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವಂತಹ ‘ಪ್ರೀತಿ’ ಗೆಲ್ಲುವುದು ಬಹಳ ಕಡಿಮೆ. ಇದಕ್ಕೆ ಕಾರಣ ಹುಡುಕಿದಾಗ ಸಿಗುವ ಉತ್ತರವೇ ಸ್ನೇಹ ಮತ್ತು ಪ್ರೇಮದ ಬಗ್ಗೆ ಇರುವ ತಪ್ಪು ತಿಳುವಳಿಕೆ. ಹೌದು, ಸ್ನೇಹ ಎನ್ನುವುದೊಂದು ಸುಮಧುರ ಬಾಂಧವ್ಯ. ನಮಗೆ ಯಾವುದೇ ಸಮಸ್ಯೆಯಿದ್ದರೂ ಅದಕ್ಕೊಂದು ಪರಿಹಾರ ನಮ್ಮ ಗೆಳೆಯರ ಬಳಿ ಇರುತ್ತದೆ ಎಂಬ ಬಲವಾದ ನಂಬಿಕೆ.
ಸುಖ, ದುಖಃ, ಸಂತೋಷ, ನೋವುಗಳಲ್ಲಿ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವುದು ಸ್ನೇಹಿತರು. ಸ್ನೇಹ ಅಥವಾ ಫ್ರೆಂಡ್ ಶಿಪ್ ನ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಪುರಾಣ, ಇತಿಹಾಸ ಕಾಲದಿಂದಲೂ ಸ್ನೇಹಕ್ಕೆ ತನ್ನದೇ ಆದ ಸ್ಥಾನಮಾನ, ಗೌರವ, ಆತಿಥ್ಯವಿದೆ. ಪುರಾಣದ ಪುಟಗಳನ್ನು ಒಮ್ಮೆ ತಿರುವಿದಾಗ ಎರಡು ರೀತಿಯ ಬಿಡಿಸಲಾಗದ ಸ್ನೇಹವನ್ನು ಕಾಣಬಹುದು. ಮಹಾಭಾರತದಲ್ಲಿ ಕಂಡುಬರುವ ದುರ್ಯೋಧನ ಮತ್ತು ಕರ್ಣ ಇವರಿಬ್ಬರ ಸ್ನೇಹ ಹಾಗೂ ಕೃಷ್ಣ ಕುಚೇಲರ ಗೆಳೆತನ. ಇವರ ಸ್ನೇಹದ ಮುಂದೆ ಇಂದಿನ ಯಾವುದೇ ಗೆಳೆತನ ನಿಲ್ಲಲಾರದು ಎಂಬುದು ಸತ್ಯ.

ಏಕೆಂದರೆ, ನಿಜವಾದ ಸ್ನೇಹದ ಅರ್ಥ ಹೆಚ್ಚಿನವರಿಗೆ ತಿಳಿದಿರುವುದಿಲ್ಲ, ತಿಳಿದರೂ ಕೆಲವರು ಅದಕ್ಕೆ ಮಹತ್ವ ನೀಡುವುದಿಲ್ಲ. ಗೆಳೆತನ, ಸ್ನೇಹ ಎಂದು ನಾಟಕ ಮಾಡುತ್ತಾ ಸ್ನೇಹದ ಹೆಸರಿನಲ್ಲಿ ಸಹಾಯ ಪಡೆದು ಆಮೇಲೆ ಎದೆಗೆ ಚೂರಿ ಹಾಕಿ ಹೋಗುವವರಿದ್ದಾರೆ. ಅಂತವರ ಮಧ್ಯೆ ಮಾದರಿಯಾಗಿ ನಿಲ್ಲುವುದು ಕರ್ಣ-ದುರ್ಯೋಧನ, ಕೃಷ್ಣ-ಕುಚೇಲರ ಗೆಳೆತನ. ಸ್ನೇಹಿತರು ಸಾಯಬಹುದು ಆದರೆ ಒಂದೊಳ್ಳೆಯ ಗೆಳೆತನ ಯಾವತ್ತೂ ಸಾಯಲಾರದು, ಕೊನೆಯಿಲ್ಲದ ಸರಪಳಿಯೇ ಸ್ನೇಹ ಎನ್ನುವ ಮಾತುಗಳಿದೆ. ಆದರೆ ಆಕ್ಸ್ ಫರ್ಡ್ ಯೂನಿವರ್ಸಿಟಿ ನಡೆಸಿದ ಅಧ್ಯಯನದ ಪ್ರಕಾರ,
ಒಬ್ಬ ವ್ಯಕ್ತಿ ಪ್ರೀತಿಯಲ್ಲಿ ಬಿದ್ದರೆ ಕನಿಷ್ಠ ಪಕ್ಷ ಇಬ್ಬರು ಸ್ನೇಹಿತರನ್ನಾದರೂ ಕಳೆದುಕೊಳ್ಳುತ್ತಾನಂತೆ! ಈ ವಿಚಾರ ಹಲವರಲ್ಲಿ ಅಚ್ಚರಿ ಮೂಡಿಸಿರುವುದಂತೂ ನಿಜ.
- ಪವಿತ್ರ