Viral : ಈ ಆಧುನಿಕ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡದ ಜೀವನದಿಂದಾಗಿ, ಬಹುತೇಕರು ಈ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅನೇಕರಿಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಇಂತಹ ಸಮಸ್ಯೆಗಳಿಂದ ಬಳಲುವವರು, ಮುಕ್ತವಾಗಿ ಅವರ ಮಾನಸಿಕ ಅನಾರೋಗ್ಯದ ಬಗ್ಗೆ ಯಾರ ಬಳಿ ಹೇಳಿಕೊಳ್ಳುವ ಹಾಗಿಲ್ಲ.
ಇದನ್ನೂ ಓದಿ : https://vijayatimes.com/nithish-kumar-political-tweet/
ಇನ್ನು, ಎಷ್ಟೋ ಜನರಿಗಂತೂ ತಾವು ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿದ್ದೇವೆ ಎನ್ನುವುದೇ ಅವರಿಗೆ ಸ್ಪಷ್ಟವಾಗುವುದಿಲ್ಲ.
ಇಂತಹ ಒಂದು ವಿಚಿತ್ರ ಮಾನಸಿಕ ಅಸ್ವಸ್ಥತೆಯೇ, “ವಾಕಿಂಗ್ ಕಾರ್ಪ್ಸ್ ಸಿಂಡ್ರೋಮ್”. ಇದರ ಬಗ್ಗೆ ತಿಳಿದುಕೊಳ್ಳುವ ಮೊದಲು, ಈ ಪ್ರಶ್ನೆಗೆ ಉತ್ತರಿಸಿ.

ನೀವು ಯಾವಗಲಾದರೂ ಸತ್ತಿದ್ದೀರಾ? ಹೌದು ಎಂಬ ಉತ್ತರ ನಿಮ್ಮದಾಗಿದ್ದರೆ ನಿಮಗೆ ಕೊಟಾರ್ಡ್ಸ್ ಅಥವಾ ವಾಕಿಂಗ್ ಕಾರ್ಪ್ಸ್ ಸಿಂಡ್ರೋಮ್ ಇರಬಹುದು, ಅಥವಾ ನೀವು ನಿಜವಾಗಿಯೂ ಸತ್ತಿರಬಹುದು! ಹೌದು, ಈ ಮಾನಸಿಕ ಕಾಯಿಲೆ ಇರುವವರು ತಾವು ಯಾವಾಗಲೋ ಸತ್ತಿರುವುದಾಗಿ ನಂಬಿರುತ್ತಾರೆ. ಇಲ್ಲವೇ ತಮ್ಮ ರಕ್ತ ಪೂರ್ತಿ ಒಣಗಿಹೋಗಿದೆ ಎಂದೋ, ತಮ್ಮ ಅಂಗಗಳನ್ನು ತೆಗೆಯಲಾಗಿದೆ ಎಂದೋ ಭಾವಿಸಿರುತ್ತಾರೆ.
ಇನ್ನು ಕೆಲವರು ತಮಗೆ ಸಾವೇ ಇಲ್ಲ ಎಂದು ಭ್ರಮಿಸುವವರೂ ಇದ್ದಾರೆ. ತಲೆಗೆ ಪೆಟ್ಟು ಬಿದ್ದವರಲ್ಲಿ ಹಾಗೂ ಸ್ಕೀಜೋಫ್ರೀನಿಯಾ ರೋಗಿಗಳಲ್ಲಿ ಈ ಕಂಡೀಶನ್ ಸಾಮಾನ್ಯವಾಗಿ ಕಂಡುಬರುತ್ತದೆ. ಇನ್ನು, ಸ್ಕಾಟ್‌ಲ್ಯಾಂಡ್‌ನ ಈ ಭೂಪನ ಕತೆ ಕೇಳಿದ್ರೆ ನೀವು ಇನ್ನೆಂದೂ ಹೆಲ್ಮೆಟ್ ಹಾಕಿಕೊಳ್ಳುವುದನ್ನು ತಪ್ಪಿಯೂ ಮರೆಯುವುದಿಲ್ಲ.

ಇಲ್ಲಿ ಬೈಕ್ ಆ್ಯಕ್ಸಿಡೆಂಟ್‌ನಿಂದ ತಲೆಗೆ ಪೆಟ್ಟು ಬಿದ್ದ ಯುವಕ ತಾನು ಏಡ್ಸ್ನಿಂದ ಸತ್ತಿರುವುದಾಗಿ ಇಡೀ ಆಸ್ಪತ್ರೆಯನ್ನೇ ನಂಬಿಸುವಲ್ಲಿ ಸಫಲನಾಗಿದ್ದ! ಅಷ್ಟೇ ಅಲ್ಲ, ಆತನ ತಾಯಿ ಕೆಲ ದಿನಗಳ ನಂತರ ಅವನನ್ನು ದಕ್ಷಿಣ ಆಫ್ರಿಕಕ್ಕೆ(South Africa) ಕರೆದುಕೊಂಡು ಹೋದಾಗ ತನ್ನ ಆತ್ಮ ಈಗಾಗಲೇ ನರಕದಲ್ಲಿದೆ ಎಂದು ನಂಬತೊಡಗಿದ್ದನಂತೆ!
ನಂತರ ತಿಳಿದುಬಂದಿದ್ದು, ಈತ ವಾಕಿಂಗ್ ಕಾರ್ಪ್ಸ್ ಸಿಂಡ್ರೋಮ್ ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾನೆ ಎನ್ನುವ ಅಚ್ಚರಿಯ ಸಂಗತಿ.
- ಪವಿತ್ರ