ಬಡ ಕುಟುಂಬಗಳಿಗೆ ಅನ್ಯಾಯ ; ಮನೆಗಳಿಗೆ ಪರಿಹಾರ ನೀಡಲು ತಾರತಮ್ಯ!

rain

ಕೆ.ಆರ್.ಎಸ್ ಪಕ್ಷದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು ಕೂಡ ಬಡ ಜನರಿಗೆ ಪರಿಹಾರ ನೀಡುವಲ್ಲಿ ಗೋಲ್ ಮಾಲ್ ನಡೆದಿದೆ. ಚಿಂತಾಮಣಿ ಜಿಲ್ಲೆಯಲ್ಲಿ ಕಳೆದ 4 ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದಾಗಿ ತಾಲ್ಲೂಕಿನ ಹಿರೇ ಪಾಳ್ಯ ಗ್ರಾಮದ ಸುಮಾರು 13 ಮನೆಗಳು ಹಾನಿಗೊಳಗಾಗಿದ್ದು, ಮನೆಗಳು ನೆಲಸಮಗೊಂಡಿದೆ. ಇನ್ನು ಕೆಲ ಮನೆಗಳ ಮೇಲ್ಛಾವಣಿಗಳು ಕುಸಿದು ಹೋಗಿದೆ. ಇದನ್ನು ಸರ್ಕಾರ ಗುರುತಿಸಿ ಬಡವರ ಮನೆಗಳಿಗೆ ಪರಿಹಾರ ನೀಡುತ್ತೇವೆ. ಖಂಡಿತವಾಗಿ ಶೀಘ್ರದಲ್ಲೇ ನೀಡುವುದಾಗಿ ಭರವಸೆ ಕೊಟ್ಟಿದ್ದರು. ಮೂರು ದಿನಗಳ ಹಿಂದೆ ಜಿಲ್ಲಾಡಳಿತದ ವತಿಯಿಂದ ತಾಲ್ಲೂಕಿನ ಬೂರಗಮಾಕಲಹಳ್ಳಿ ಗ್ರಾಮದ ಸೀತಾ ರಾಮ ಕಲ್ಯಾಣ ಮಂಟಪದಲ್ಲಿ ಪರಿಹಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಆದರೆ ಆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮನೆಯನ್ನು ರಿಪೇರಿ ಮಾಡಿಸಿಕೊಳ್ಳಲು ಪರಿಹಾರ ನೀಡಲಾಯಿತು.

ಪರಿಹಾರ ನೀಡುವಲ್ಲಿ ಸರ್ಕಾರ ತಾರತಮ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷ ಮತ್ತು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳ ಸಾಥ್ ತೆಗೆದುಕೊಂಡು ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ಸರ್ಕಾರ ಘೋಷಿಸಿರುವ ಪರಿಹಾರ 5 ಲಕ್ಷ! ಆದರೆ ಕೊಟ್ಟಿದ್ದು ಕೇವಲ ಐವತ್ತು ಸಾವಿರ ರೂ.ಗಳನ್ನು. ಭಾರಿ ಹಾನಿಯಾದ ಬಡವರ ಮನೆಗಳಿಗೆ ಸಾವಿರ ರೂ.ಗಳ ಹಣ ನೀಡಿ, ಅಲ್ಪಸ್ವಲ್ಪ ಹಾನಿಗೊಳಗಾದ ಮನೆಗಳಿಗೆ ಪೂರ್ತಿ 5 ಲಕ್ಷ ರೂಪಾಯಿ ಪರಿಹಾರ ನೀಡಿ ಬಡವರಿಗೆ ಅನ್ಯಾಯ ಮಾಡಿದೆ ಎಂದು ಹೀರೆ ಪಾಳ್ಯ ಗ್ರಾಮದ ಸುಭದ್ರಾ, ಕೃಷ್ಣಪ್ಪ, ವೆಂಕಟಲಕ್ಷ್ಮಮ್ಮ, ಚಿಕ್ಕ ಬೈರೆಡ್ಡಿ, ರೆಡ್ಡಮ್ಮ ,ನಾರಾಯಣಸ್ವಾಮಿ, ಸಾವಿತ್ರಮ್ಮ ,ನೀಲಮ್ಮ, ರತ್ನಮ್ಮ ಎಂಬ ವ್ಯಕ್ತಿಗಳು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮಳೆಯಿಂದ ಸಂಪೂರ್ಣವಾಗಿ ಹಾಳಾಗಿರುವ ಮನೆಗಳಿಗೆ ಕೇವಲ ಐವತ್ತು ಸಾವಿರ ರೂ ನೀಡಿ ಸರ್ಕಾರ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶ್ರೀಮಂತರಿಗೊಂದು ನ್ಯಾಯ ಬಡವರಿಗೆ ಒಂದು ನ್ಯಾಯ ಎಂದು ದೂರಿದರು. ಕೂಡಲೇ ಮಳೆಯಿಂದ ಸಂಪೂರ್ಣವಾಗಿ ಹಾನಿಗೊಳಗಾಗಿರುವ ಮನೆಗಳಿಗೆ 5 ಲಕ್ಷ ಪರಿಹಾರ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಕೆ.ಆರ್.ಎಸ್ ಪಕ್ಷವನ್ನು ಜೊತೆಗೆ ತೆಗೆದುಕೊಂಡು ತಾಲ್ಲೂಕು ಕಛೇರಿ ಎದುರುಗಡೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Exit mobile version