ದಿನನಿತ್ಯ ಸೇವಿಸುವ ಈ ಆಹಾರಗಳು ವಿಷಕ್ಕೆ ಸಮ ; ಈ ಆಹಾರಗಳನ್ನು ಸೇವಿಸುವ ಮುನ್ನ ಇರಲಿ ಎಚ್ಚರ!

Foods

ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ಣುಡಿಯೇ ಇದೆ. ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ, ಸೂಕ್ತಪ್ರಮಾಣದಲ್ಲಿ ತಾಜಾ ಮತ್ತು ಪೌಷ್ಠಿಕ ಆಹಾರವನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದು.

ನಾವು, ಮನುಷ್ಯರು, ಮಿಶ್ರಾಹಾರಿಗಳು. ಅತ್ತ ಹಸಿ ಹುಲ್ಲನ್ನೂ ತಿನ್ನಲಾರೆವು, ಇತ್ತ ಪಕ್ಕಾ ಮಾಂಸಾಹಾರಿಗಳಂತೆ ಹಸಿಮಾಂಸವನ್ನೂ ಸೇವಿಸಲಾರೆವು. ನಮಗೆ ಆಹಾರ ಬೇಯಿಸಿರಬೇಕು. ಆದರೆ ನಮಗರಿವಿಲ್ಲದೇ ಸೇವಿಸುತ್ತಾ ಬಂದಿರುವ ಕೆಲವು ಆಹಾರಗಳು ವಾಸ್ತವವಾಗಿ ಆರೋಗ್ಯಕ್ಕೆ ಹಾನಿಕರವಾಗಿದ್ದು, ಇದುವರೆಗೆ ಯಾರೂ ನಮಗೆ ಈ ಬಗ್ಗೆ ಎಚ್ಚರಿಕೆ ನೀಡದೇ ಇರುವ ಕಾರಣ ಅರಿವಿಲ್ಲದೆಯೇ ಅಪಾಯವನ್ನು ನಿಧಾನವಾಗಿ ಎದುರುಹಾಕಿಕೊಳ್ಳುತ್ತಿದ್ದೇವೆ. ಹಾಗಾಗಿ ಈ ಆಹಾರಗಳನ್ನು ಸೇವಿಸುವ ಮುನ್ನ ಎಚ್ಚರವಿರಲಿ.

ಹಸಿ ಗೋಡಂಬಿ : ಇದು ಹಲವು ರೀತಿಯ ಅಲರ್ಜಿಗಳನ್ನು ಹುಟ್ಟುಹಾಕಿ ಇತರ ಆಹಾರಗಳನ್ನು ಸೇವಿಸಿದಾಗ ಚರ್ಮದಲ್ಲಿ ತುರಿಕೆ, ಗುಳ್ಳೆಗಳು ಏಳುವುದು, ಮೊದಲಾದ ತೊಂದರೆಗಳನ್ನು ಹುಟ್ಟಿಸುತ್ತದೆ.

ಕಾಡು ಅಣಬೆ : ಅಣಬೆಗಳಲ್ಲಿ ಹಲವು ವಿಧಗಳಿವೆ. ಆದರೆ ನೋಡಲು ಸುಂದರವಾಗಿರುವ ಎಲ್ಲವೂ ತಿನ್ನಲು ಯೋಗ್ಯವಲ್ಲ. ಅದರಲ್ಲೂ ಕಾಡಿನಿಂದ ತಂದಿರುವ ಅಣಬೆಗಳು ವಿಷಪೂರಿತವಾಗಿರಬಹುದು. ಪರಿಣಾಮವಾಗಿ ಹೊಟ್ಟೆ ತೊಳೆಸುವಿಕೆ, ವಾಂತಿ, ಭೇದಿ ಮೊದಲಾದ ತೊಂದರೆಗಳು ಉಂಟಾಗಬಹುದು. ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಸಾವೂ ಕೂಡ ಎದುರಾಗಬಹುದು.

ಮರಗೆಣಸು : ಕೇರಳದಲ್ಲಿ ಅತ್ಯಂತ ಜನಪ್ರಿಯವಾಗಿರುವ ಈ ಗೆಣಸಿಗೆ ಬೇರುಗೆಣಸು ಎಂದೂ ಕರೆಯುತ್ತಾರೆ. ಇದನ್ನು ಬೇಯಿಸಿ ತಿಂದರೆ ಏನೂ ಅಪಾಯವಿಲ್ಲ, ಆದರೆ ಹಸಿಯಾಗಿ ತಿಂದರೆ ಇದರ ಒಂದು ಕಿಣ್ವ ಸಯನೈಡ್ ನಂತೆ ಪರಿವರ್ತಿತವಾಗಿ ಆರೋಗ್ಯಕ್ಕೆ ಮಾರಕವಾಗುತ್ತದೆ.

ಶೇಂಗಾ : ಹಸಿ ಶೇಂಗಾ ಬೀಜವನ್ನು ತಿನ್ನುವುದು ಅಲರ್ಜಿಕಾರಕವಾಗಿದೆ. ಸ್ವಲ್ಪ ಪ್ರಮಾಣದಲ್ಲಿ ತಿಂದರೆ ತೊಂದರೆಯಿಲ್ಲ, ಆದರೆ ರುಚಿಯಾಗಿದೆ ಎಂದು ಹಸಿಯಾಗಿಯೇ ತಿನ್ನುತ್ತಾ ಹೋದರೆ ಯಾವುದೋ ಒಂದು ಅಲರ್ಜಿ ಬಹುವಾಗಿ ಕಾಡಬಹುದು. ಆದ್ದರಿಂದ ಹುರಿದು ಅಥವಾ ಬೇಯಿಸಿ ತಿನ್ನುವುದು ಕ್ಷೇಮ.

ಹಾಲು : ಕರೆದ ಹಾಲನ್ನು ಕುದಿಸದೇ ಕುಡಿಯದಿರಿ ಎಂದು ಹಿರಿಯರು ಹೇಳುವುದನ್ನು ಏಕೆ ಎಂಬ ಪ್ರಶ್ನೆ ಕೇಳದೆ ಪಾಲಿಸಿದಷ್ಟೂ ಉತ್ತಮ. ಏಕೆಂದರೆ ಹಸಿ ಹಾಲಿನಲ್ಲಿ ಕೆಲವು ಬ್ಯಾಕ್ಟೀರಿಯಾಗಳಿದ್ದು, ಅವನ್ನು ಜೀರ್ಣಿಸಿಕೊಳ್ಳಲು ಕೇವಲ ಕರುವಿನ ಹೊಟ್ಟೆಯಲ್ಲಿರುವ ಜೀರ್ಣರಸಗಳಿಗೆ ಮಾತ್ರ ಸಾಧ್ಯ. ನಮ್ಮ ಹೊಟ್ಟೆಯಲ್ಲಿ ಅವು ಇಲ್ಲದಿರುವುದರಿಂದ ಪ್ಯಾಶ್ಚಿಕರಿಸಿ ಕುಡಿಯುವುದು ಉತ್ತಮ. ಇತ್ತೀಚಿನ ಸಂಶೋಧನೆಯಲ್ಲಿ ಹಸಿ ಹಾಲಿನಲ್ಲಿ ಮಾರಕವಾದ ಕೊಲೈ ಬ್ಯಾಕ್ಟೀರಿಯಾ ಸಹಾ ಇರುವುದು ಪತ್ತೆಯಾಗಿದೆ.

Exit mobile version