ಟಿಬೆಟ್‍ಗೆ ಸಂಬಂಧಿಸಿದ ಭಾರತದ ನಿಲುವು 2014ರ ನಂತರ ಬದಲಾಗಿದೆ : ಸೆರಿಂಗ್ ಪೆಂಪಾ!

penpa

ಟಿಬೆಟ್(Tibet) ಚೀನಾದ(China) ಒಂದು ಭಾಗ ಎಂಬ ವಾದವನ್ನು ನೆಹರು ಸರ್ಕಾರ ಒಪ್ಪಿಕೊಂಡಿತ್ತು. ಆದರೆ ಭಾರತ ಈಗ ಈ ವಾದವನ್ನು ಪ್ರತಿಪಾದಿಸುತ್ತಿಲ್ಲ. ಅದು 2014ರ ನಂತರ ತನ್ನ ನೀತಿಯನ್ನು ಬದಲಾಯಿಸಿಕೊಂಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಕೇಂದ್ರ ಟಿಬೆಟಿಯನ್ ಆಡಳಿತದ ಅಧ್ಯಕ್ಷ(President) ಸೆರಿಂಗ್ ಪೆಂಪಾ(Sering Pempa) ಅಭಿಪ್ರಾಯಪಟ್ಟಿದ್ದಾರೆ.


ಅಮೇರಿಕಾದ ಉನ್ನತ ಅಧಿಕಾರಿಗಳು ಮತ್ತು ಅಮೇರಿಕಾ ಕಾಂಗ್ರೆಸ್ ಸದಸ್ಯರ ಭೇಟಿಗಾಗಿ ಸೆರಿಂಗ್ ಪೆಂಪಾ ಅವರು ಅಮೇರಿಕಾ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಅಮೇರಿಕಾದ ಮಾದ್ಯಮಗಳೊಂದಿಗೆ ಮಾತನಾಡಿರುವ ಅವರು, ಟಿಬೆಟ್ ಚೀನಾದ ಭಾಗ ಎಂಬ ವಾದವನ್ನು ಭಾರತ ಇಂದು ಒಪ್ಪುತ್ತಿಲ್ಲ. ಭಾರತ ಅಖಂಡ ಚೀನಾ ತತ್ವವನ್ನು ಒಪ್ಪಿಕೊಳ್ಳಬೇಕಾದರೆ, ಚೀನಾ ಕೂಡಾ ಕಾಶ್ಮೀರ ವಿವಾದವನ್ನು ಬದಿಗಿಟ್ಟು ಅಖಂಡ ಭಾರತ ತತ್ವವನ್ನು ಒಪ್ಪಿಕೊಳ್ಳಬೇಕೆಂದು ಭಾರತ ಬಯಸುತ್ತದೆ. ಹೀಗಾಗಿಯೇ ಟಿಬೆಟ್ ವಿಷಯದಲ್ಲಿ ಭಾರತದ ನಿಲುವು ಇಂದು ಬದಲಾಗಿದೆ. ಹಾಗೆಂದ ಮಾತ್ರಕ್ಕೆ ಹಿಂದಿನ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಅವರು ತಪ್ಪು ಮಾಡಿದರೆಂದು ಹಲವರು ಭಾವಿಸುತ್ತಾರೆ.

ನೆಹರು ಅವರು ಅಂದು ತಮ್ಮ ದೇಶಕ್ಕೆ ಯಾವುದು ಸರಿ ಎಂದು ಭಾವಿಸಿದ್ದರೋ, ಅದನ್ನೇ ಮಾಡಿದ್ದರು ಎಂದು ಸೆರಿಂಗ್ ಹೇಳಿದರು.
ಪಂಡಿತ ನೆಹರು ಅವರು ಚೀನಾದ ಮೇಲೆ ಹೆಚ್ಚಿನ ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿದ್ದರು. ಟಿಬೆಟ್ ಕುರಿತ ನೆಹರು ಅವರ ನಿರ್ಧಾರಗಳು ವಿಶ್ವ ದೃಷ್ಠಿಕೋನವನ್ನು ಹೊಂದಿದ್ದವು. ವಾಸ್ತವದಲ್ಲಿ ಅವರು ಚೀನಾವನ್ನು ನಂಬಿದ್ದರು. 1962ರಲ್ಲಿ ಚೀನಾ ಭಾರತದ ಮೇಲೆ ಆಕ್ರಮಣ ಮಾಡಿದಾಗ ಅವರು ದಿಗ್ಬ್ರಾಂತರಾಗಿದ್ದರು. ಅವರ ಸಾವಿಗೆ ಇದೂ ಕೂಡಾ ಒಂದು ಕಾರಣ ಎಂದು ಕೆಲವರು ಹೇಳುತ್ತಾರೆ.

1962ರಲ್ಲಿ ನೆಹರು ಅವರು ತೆಗೆದುಕೊಂಡ ನಿರ್ಧಾರವನ್ನು ನಾನು ದೂಷಿಸುವುದಿಲ್ಲ. ಯಾವುದೇ ರಾಷ್ಟ್ರದ ನಾಯಕನಿಗೆ ತನ್ನ ದೇಶವೇ ಮೊದಲ ಆದ್ಯತೆಯಾಗಿರುತ್ತದೆ. ಅಂದು ನೆಹರು ಅವರು ಚೀನಾದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳಲೇಬೇಕಿತ್ತು. ಅಂದು ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ದೇಶಗಳು ಹೀಗೆ ಮಾಡಿದ್ದವು ಎಂದು ಸೆರಿಂಗ್ ಪೆಂಪಾ ಹೇಳಿದರು.

Exit mobile version