ದೇಶದ ಮೊದಲ ಮಂಗಳಮುಖಿ ನ್ಯಾಯಾಧೀಶೆ ಜೋಯಿತಾ ಮೊಂಡಲ್ ; ಜೋಯಿತಾ ಅವರ ಜೀವನವೇ ರೋಚಕ!

Jyoita Mondal

ಮಂಗಳಮುಖಿಯರಿಗೆ(Transgender) ಸರ್ಕಾರ(Government) ಎಷ್ಟೇ ಅನುಕೂಲಗಳನ್ನು ಮಾಡಿಕೊಟ್ಟಿದ್ದರೂ, ಇಂದಿಗೂ ಅವರು ಶೋಷಣೆಗೆ ಒಳಗಾಗುತ್ತಿರುವುದು ಮಾತ್ರ ಸತ್ಯ.

ಇಂತಹ ಶೋಷಣೆ ಅವಮಾನಗಳನ್ನು ಮೆಟ್ಟಿ ನಿಂತು ನ್ಯಾಯಾಧೀಶೆಯಂತಹ(Judge) ಉನ್ನತ ಹುದ್ದೆಗೇರಿದ ಜೋಯಿತಾ ಮೊಂಡೆಲ್(Jyoita Mondal) ಅವರ ಜೀವನದ ಕಥೆಯೇ ರೋಚಕ. 2009ರಲ್ಲಿ ಕೋಲ್ಕತ್ತಾದ ಸಿಲುಗುರಿಯ ಮನೆಯಿಂದ ಹೊರಬಿದ್ದ ಜೊಯಿತಾ ಮೊಂಡಲ್ಗೆ ಆಕೆ ದೇಶದ ಮೊದಲ ತೃತೀಯಲಿಂಗಿ ನ್ಯಾಯಾಧೀಶೆಯಾಗಬಹುದು ಎಂದು ಕಲ್ಪನೆಯೇ ಇರಲಿಲ್ಲವಂತೆ.

ಬಾಂಗ್ಲಾದೇಶದ(Bangladesh) ಗಡಿಭಾಗ ಮುಸಲ್ಮಾನರು ಹೆಚ್ಚಿರುವ ಪ್ರದೇಶವಾದ ಉತ್ತರ ದಿನಜ್ ಪುರ್ ಜಿಲ್ಲೆಯ ಇಸ್ಲಾಂಪುರ್ ಕ್ಕೆ 2010ರಲ್ಲಿ ಜೊಯಿತಾ ಆಕಸ್ಮಿಕವಾಗಿ ಕಾಲಿಟ್ಟಾಗ ಅಲ್ಲಿ ಎದುರಿಸಿದ ಪ್ರತಿಕೂಲ ವಾತಾವರಣವನ್ನೇ ಸವಾಲಾಗಿ ತೆಗೆದುಕೊಂಡು ಅಲ್ಲಿಯೇ ನೆಲೆ ನಿಂತರು. ಅಲ್ಲಿಂದ ಏಳು ವರ್ಷಗಳವರೆಗೆ ಅವರ ಸಂಘಟನೆಯಾದ ದಿನಜ್ ಪುರ್ ನೊಟುನ್ ಅಲೊ(ದಿನಜ್ ಪುರ್ ನ್ಯೂ ಲೈಟ್), ಆ ಪ್ರದೇಶದಲ್ಲಿ ಸುಮಾರು 2,200 ಮಂದಿ ತೃತೀಯ ಲಿಂಗಿಗಳನ್ನು ಒಗ್ಗೂಡಿಸುವ ಮಟ್ಟಿಗೆ ಬೆಳೆಯಿತು.

2017 ಜುಲೈ 8 ರಂದು ಇಸ್ಲಾಂಪುರ್ ನ ಲೋಕ ಅದಾಲತ್ ನ ನ್ಯಾಯಾಧೀಶೆಯಾಗಿ ಜೊಯಿತಾ ನೇಮಕಗೊಂಡಾಗ ತೃತೀಯಲಿಂಗಿಗಳ ಸಮುದಾಯದಲ್ಲಿ ನಿಜಕ್ಕೂ ಹರ್ಷದ ವಾತಾವರಣ ಕಂಡಿತು. ಸರ್ಕಾರಿ ಮತ್ತು ಖಾಸಗಿ ರಂಗಗಳ ಹಲವು ಉದ್ಯೋಗಗಳಲ್ಲಿ ತೃತೀಯಲಿಂಗಿಗಳು ಕೆಲಸ ಮಾಡುವುದನ್ನು ಕಂಡಾಗ ನಾನು ನ್ಯಾಯಾಧೀಶೆಯಾಗಿರುವುದು ಸಾರ್ಥಕ ಎಂದು ಭಾವಿಸುತ್ತೇನೆ ಎನ್ನುತ್ತಾರೆ ಜೊಯಿತಾ. ಹೀಗೆ ತೃತೀಯ ಲಿಂಗಿಗಳಲ್ಲಿ ಕೆಲವರು ನ್ಯಾಯಾಧೀಶರು, ಪ್ರಾಂಶುಪಾಲರಾದರೆ ಈ ಸಮುದಾಯದಲ್ಲಿ ಬದಲಾವಣೆಯಾಗಿದೆ ಎಂದರ್ಥವಲ್ಲ.

ಅವರು ಲೈಂಗಿಕ ಕಾರ್ಯಕರ್ತರಾಗಿ, ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷೆ ಬೇಡುವುದು ನಿಲ್ಲುವವರೆಗೆ ವೈಯಕ್ತಿಕ ಬೆಳವಣಿಗೆಗೆ ಅರ್ಥವಿಲ್ಲ. ತೃತೀಯ ಲಿಂಗಿಗಳಲ್ಲಿ ಬಹುತೇಕರು ವಿದ್ಯಾವಂತರಾಗಿರದಿದ್ದರೂ ಕೂಡ ಅವರನ್ನು ಗ್ರೂಪ್ ಡಿ ನೌಕರರಾಗಿ ನೇಮಕ ಮಾಡಿಕೊಳ್ಳಬಹುದು. ಕೋಲ್ಕತ್ತಾದಿಂದ ಉತ್ತರ ದಿನಜ್ ಪುರ್ ಗೆ ತಮ್ಮ ಹಕ್ಕುಗಳ ಹೋರಾಟಕ್ಕಾಗಿ ಮಾತ್ರ ಬರಲಿಲ್ಲ. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ನನ್ನ ಸಮುದಾಯದವರೇ ಕಾರಣ. ಹಾಗಾಗಿ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸರ್ಕಾರಿ ಉದ್ಯೋಗಗಳಲ್ಲಿ ತೃತೀಯ ಲಿಂಗಿಗಳನ್ನು ನೇಮಕ ಮಾಡಿಕೊಂಡರೆ ನಮ್ಮ ಪರಿಸ್ಥಿತಿಯೂ ಉತ್ತಮವಾಗುತ್ತದೆ.

ಕೂಲಿ ಕೆಲಸ, ಪಿಯೊನ್ ಅಥವಾ ಇತರ ಗ್ರೂಪ್ ಡಿ ಕೆಲಸಗಳು ಕೂಡ ಗೌರವಯುತವಾದದ್ದು ಎಂದು ನಂಬುತ್ತೇನೆ ಎನ್ನುತ್ತಾರೆ. ಕೆಲಸ ಚಿಕ್ಕದೋ, ದೊಡ್ಡದೋ ಎಂಬುದು ಮುಖ್ಯವಲ್ಲ, ಆದರೆ ಆ ಕೆಲಸ ಸಮಾಜದಲ್ಲಿ ನಮಗೆ ಗೌರವ ತರುವಂತಹ ಕೆಲಸವೇ ಎಂಬುವುದು ಮುಖ್ಯ ಎನ್ನುತ್ತಾರೆ ಜೋಯಿತಾ. ಜೊತೆಗೆ ಮತದಾನದ ಗುರುತು ಪತ್ರ ಸಿಕ್ಕಿ ಮೊದಲ ಬಾರಿಗೆ 2016ರಲ್ಲಿ ಜೊಯಿತಾ ಮತ ಚಲಾಯಿಸಿದ್ದರು ಎನ್ನುವುದು ಕೂಡ ವಿಶೇಷ.

ಮಂಗಳಮುಖಿಯರನ್ನು ವಿಚಿತ್ರ ರೀತಿಯಲ್ಲಿ ನೋಡದೇ, ಅವರನ್ನೂ ಸಹ ಸಾಮಾನ್ಯ ಜನರಂತೆ ಪರಿಗಣಿಸಬೇಕು. ಸಮಾಜದಲ್ಲಿ ಯಾವುದೇ ಮುಜುಗರಕ್ಕೊಳಗಾಗದೇ ನೆಮ್ಮದಿಯ ಬದುಕು ನಡೆಸುವಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

Exit mobile version