ರಾಜರೇ ಆಗೋದಿಲ್ಲ ಅಂತ ಕೈ ಚೆಲ್ಲಿದ್ದ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣದ ಹಿಂದಿದೆ ರೋಚಕ ಕಥೆ!

mysuru

ಕಾವೇರಿ ನೀರು, ಕೆಆರ್‌ಎಸ್ ಡ್ಯಾಮ್(KRS Dam) ಅನ್ನೋದು ನಮ್ಮ ಕರ್ನಾಟಕದ(Karnataka) ಜನರ ಬದುಕು ಭಾವಗಳಲ್ಲಿ ಒಂದಾಗಿ ಹೋಗಿರುವಂತಹ ಭಾವನಾತ್ಮಕ ವಿಷಯ. ಇಂತಹ ಕೆ.ಆರ್.ಎಸ್ ಡ್ಯಾಮ್ ನಿರ್ಮಾಣವಾಗಿದ್ದೇ ಒಂದು ರೋಚಕ ಕಥೆ.

ಹೌದು, ಆ ಕಾಲದಲ್ಲಿ ಮೈಸೂರು ಸಂಸ್ಥಾನದ ರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್(Nalwadi Krishnaraja Wadiyar) ಅವರು ಒಮ್ಮೆ ಮಾರುವೇಷದಲ್ಲಿ ಸಂಚಾರಿಸುವಾಗ ಮಂಡ್ಯ(Mandya) ಜಿಲ್ಲೆಯ ಮೂಲಕ ಹಾದು ಹೋಗುವಾಗ ಹಚ್ಚ ಹಸಿರಿನ ಭೂಮಿ ವರುಣನ ಸುಳಿವಿಲ್ಲದೆ ಬಿಸಿಲ ದಗೆಗೆ ಒಣಗಿ ಬರಡಾಗಿರೋದನ್ನ ಕಂಡು ಬೇಸರ ಮಾಡಿಕೊಳ್ತಾರೆ. ಹಾಗೇ ಮುಂದೆ ಹೋಗುವಾಗ ಅವರಿಗೆ ಕಾವೇರಿ ನೀರಿನ ಸಮರ್ಪಕ ಬಳಕೆಯಾಗದೇ ವ್ಯರ್ಥವಾಗುತ್ತಿರುವುದು ಕಂಡು ಬರುತ್ತದೆ. ಇದನ್ನು ನೋಡಿ ಬಹಳ ಆಲೋಚಿಸಿ ರಾಜರು ಇಲ್ಲೊಂದು ಡ್ಯಾಮ್ ಕಟ್ಟುವ ನಿರ್ಧಾರಕ್ಕೆ ಬರ‍ುತ್ತಾರೆ.

ಹೀಗೆ ಡ್ಯಾಮ್ ಕಟ್ಟಬೇಕು ಅಂದರೆ ಒಂದು ಒಳ್ಳೆಯ ಪ್ಲಾನ್ ಬೇಕು, ಆಗ ಒಬ್ಬ ಉತ್ತಮ ಇಂಜಿನಿಯರ್ ಹುಡುಕಾಡುತ್ತಿದ್ದಾಗ ಸಿಕ್ಕ ವ್ಯಕ್ತಿಯೇ ಅಪ್ರತಿಮ ಪ್ರತಿಭಾವಂತರಾದ ಸರ್ ಎಂ ವಿಶ್ವೇಶ್ವರಯ್ಯನವರು. ಇವರು ಆಗ ಬಾಂಬೆಯಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ತಾಯ್ನಾಡಿಗೆ ಮರಳಿ ಕೆಲಸ ಮಾಡಲು ಅವಕಾಶ ಸಿಕ್ಕಾಗ ಬಹಳ ಖುಷಿಯಿಂದ ಒಪ್ಪಿಕೊಂಡರು. ಹಾಗೇ ಅರಮನೆಗೆ ಬಂದವರೇ ರಾಜರಿಗೆ ಡ್ಯಾಮ್‌ನ ಒಂದು ಪ್ಲಾನ್ ಕೊಟ್ಟು ಆ ನಕ್ಷೆಯ ಆಧಾರದ ಮೇಲೆ ಖರ್ಚುವೆಚ್ಚಗಳ ವಿವರ ಕೊಡ್ತಾರೆ.

ಆಗ ರಾಜರ ಹಣಕಾಸಿನ ಮಂತ್ರಿ, ಈ ಯೋಜನೆಯನ್ನು ಕೈಬಿಡೋದೆ ಒಳ್ಳೆದು ಯಾಕಂದ್ರೆ ಈ ಡ್ಯಾಮ್ ನಿರ್ಮಾಣಕ್ಕೆ ಮೈಸೂರಿನ ಮೂರು ವರ್ಷಗಳ ಆದಾಯ ಬೇಕಾಗುತ್ತೆ, ಇದೊಂದು ಡ್ಯಾಮ್‌ನ ಮೇಲೆ ಅಷ್ಟು ಹಣ ಸುರಿಯುವುದರಿಂದ ಹಲವು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ ಅಂತ ಹೇಳುತ್ತಾರೆ. ಆಗ ರಾಜರು ಡ್ಯಾಮ್ ನಿರ್ಮಾಣದ ಯೋಜನೆಯನ್ನು ಕೈಬಿಟ್ಟು ಮಂಕಾಗಿ ಕುಳಿತುಬಿಡ್ತಾರೆ. ಆ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ ಮಡದಿ ಪ್ರತಾಪ್ ಕುಮಾರಿಯವರು ಗಂಡನ ಬಳಿ ಬಂದು ಡ್ಯಾಮ್ ನಿರ್ಮಾಣಕ್ಕೆ ನನ್ನ ಒಡವೆಯನ್ನು ಮಾರಿ ಅಂತ ಅಷ್ಟು ಒಡವೆಯನ್ನು ಒಡೆಯರಿಗೆ ಕೊಡುತ್ತಾರೆ.

ಈ ವಿಚಾರ ಬಹಳ ಬೇಗ ಹಳ್ಳಿ ಹಳ್ಳಿಗಳಿಗೆ ಹಬ್ಬಿ ಜನರೆಲ್ಲಾ ಮಹಾರಾಣಿಯವರೇ ಒಡವೆಯನ್ನು ನಮ್ಮ ಒಳಿತಿಗಾಗಿ ಕೊಟ್ಟಾಗ ನಾವ್ಯಾಕೆ ಕೊಡಬಾರದು ಅಂತ ನಿರ್ಧರಿಸಿ ಎಲ್ಲ ಜನರು ಸಹ ಒಡವೆಯನ್ನು ರಾಜರಿಗೆ ತಂದುಕೊಡುತ್ತಾರೆ ಜೊತೆಗೆ ತಮ್ಮ ಬಳಿಯಿದ್ದ ಅಲ್ಪಸ್ವಲ್ಪ ಹಣವನ್ನು ಸಹ ರಾಜರಿಗೆ ತಂದುಕೊಡುತ್ತಾರೆ.
ಹೀಗೆ ಬಂದ ಒಡವೆಗಳನ್ನು ಬಾಂಬೆಯಲ್ಲಿ ಮಾರಿ ಬಂದ ಹಣದಿಂದ ನಾಲ್ವಡಿ ಕೃಷ್ಣರಾಜ್ ಒಡೆಯರು ಯಶಸ್ವಿಯಾಗಿ ಕೆಆರ್‌ಎಸ್ ಡ್ಯಾಮ್ ಕಟ್ಟುತ್ತಾರೆ. ಇದು ದೇಶ ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ಅದ್ಭುತ ಡ್ಯಾಮ್ ನಿರ್ಮಾಣದ ಹಿನ್ನಲೆ.

ನಮ್ಮ ಕರ್ನಾಟಕದ ಜನರ ಬೆವರಿನ ಫಲ ಈ ಕೆ.ಆರ್.ಎಸ್ ಹಾಗಾಗಿ, ಕೆ ಆರ್ ಎಸ್, ಕಾವೇರಿ ನೀರು ಅನ್ನೋದು ಕರ್ನಾಟಕದ ಜನರ ಪಾಲಿಗೆ ಕೇವಲ ಒಂದು ವಿಷಯವಲ್ಲ, ಅದರ ಜೊತೆಗಿರೋದು ಭಾವನಾತ್ಮಕ ಸಂಬಂಧ ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ.

Exit mobile version